ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆಯೇ ಮಹತ್ವದ ಘೋಷಣೆಗಳನ್ನು ಪ್ರಕಟಿಸಿದ್ದಾರೆ.
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ದಕ್ಷಿಣ ಗಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಮೆಕ್ಸಿಕೋ – ಅಮೇರಿಕಾ ಗಡಿ ಭಾಗದಲ್ಲಿ ಅಮೇರಿಕಾ ಸೇನೆಯನ್ನು ನಿಯೋಜಿಸಲಾಗುತ್ತದೆ. ಈ ಮೂಲಕ ಅಕ್ರಮ ನುಸುಳುಕೋರರಿಗೆ ಬಾಗಿಲು ಬಂದ್ ಆಗಲಿದೆ ಎಂದು ತಿಳಿಸಿದರು. ಈಗಾಗಲೇ ಅಮೇರಿಕಾ ಪ್ರವೇಶಿಸಿರುವ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ ಹಾಗೂ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.
ಅಮೇರಿಕಾ ಸೇನೆಯನ್ನು ಬಲಪಡಿಸುವುದು ನಮ್ಮ ಗುರಿ 2017 ರಂತೆ ಜಗತ್ತಿನ ಬಲಿಷ್ಠ ಸೇನೆಯನ್ನು ನಿರ್ಮಿಸುತ್ತೇವೆ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ಪಾರದರ್ಶಕತೆಗಾಗಿ ಇಲಾಖೆಯನ್ನು ಸ್ಥಾಪಿಸುತ್ತೇವೆ, ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇವೆ ಎಂದರು.
ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಭಾರತ ಸೇರಿದಂತೆ ಹಲವು ದೇಶಗಳು ಅಮೇರಿಕಾ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ವಿರೋಧಿಸಿ, ನಾವೂ ಪ್ರತೀಕಾರಕ್ಕೆ ಮುಂದಾಗುತ್ತೇವೆ. ಅದರಂತೆ ಅನ್ಯ ದೇಶಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಬಗ್ಗೆ ತಮ್ಮ ಮೊದಲ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದು, ಅಮೇರಿಕಾದ ಜನರ ಒಳಿತಿಗಾಗಿ ಈ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.