ಬೆಂಗಳೂರು : ರಾಜ್ಯ ರಾಜಕಾರಣದಲ್ಲೀಗ ಛತ್ರಿಯದ್ದೇ ಸದ್ದು. ಮಂಡ್ಯದವರ ಛತ್ರಿ ಬುದ್ಧಿ ಬೇಡ ಎಂದಿದ್ದ ಡಿಕೆಶಿ ವಿರುದ್ಧ ಕೆಲವರು ಸಿಡಿದೆದ್ದಿದ್ದಾರೆ. ಹೌದು, ನನಗೆ ಮದ ಇದೆ. ಏನೀಗ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಮಾ. 17ರಂದು ಯೂತ್ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಂದು ನೇಗಿಲು ಹಿಡಿದುಕೊಂಡು ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರಿಂದ ವೇದಿಕೆ ಮೇಲೆ ನೂಕು ನುಗ್ಗಲು ಹೆಚ್ಚಾಗಿತ್ತು. ನೇಗಿಲು ಕೊಡಲು ಹೋದಾಗ ಡಿಕೆಶಿ ಗದರಿದ್ದರು. ಮಂಡ್ಯದವರ ಛತ್ರಿ ಬುದ್ಧಿ ಎಲ್ಲ ಬೇಡ ಇಲ್ಲಿ ಎಂದರು. ಈಗ ಅದೇ ಛತ್ರಿ ಬುದ್ಧಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡಿಕೆಶಿ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ಕೂಗು ವ್ಯಕ್ತವಾಗಿದೆ. ಡಿಕೆಶಿ ಅವರಿಗೆ ಅಧಿಕಾರದ ಮದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಡಿಕೆಶಿ ಅವರು, ನನಗೆ ಮದ ಜಾಸ್ತಿ ಇದೆ, ನನಗೆ ಮದ ಇದ್ರೆ ಕಡಿಮೆ ಮಾಡಲಿ. ನಾನು ಹೇಳಿರುವುದನ್ನ ಇವನು ನೋಡಿದ್ದಾನಾ. ಪ್ರೀತಿ ಪಾತ್ರರಿಗೆ ಹೇಳ್ತೀನಿ. ಅದೆಲ್ಲ ಸುಳ್ಳು, ಯಾವ ಛತ್ರಿನೂ ಇಲ್ಲ. ಛತ್ರಿ ಅಂತಾ ನಾನು ಯಾರಿಗೆ ಅಂದಿದ್ದೀನಿ? ಕಳ್ ನನ್ ಮಗ ಅಂತಾರೆ. ಸುಳ್ ನನ್ ಮಗಾ ಅಂತಾರೆ. ನನಗೆ ಬೇಕಾದವರಿಗೆ ಹೇಳುತ್ತೇನೆ ಎಂದು ಮಂಡ್ಯದವರ ಛತ್ರಿ ಬುದ್ಧಿ ಗೊತ್ತು ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.