Donald Trump Indicted: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಾವು ಅಧಿಕಾರದಿಂದ ನಿರ್ಗಮಿಸಿದ ನಂತರವೂ ಕೆಲವು ರಹಸ್ಯ ದಾಖಲೆಗಳನ್ನು ತಮ್ಮ ಸ್ವಾಧೀನದಲ್ಲಿಯೇ ಇರಿಸಿಕೊಂಡ ಪ್ರಕರಣದಲ್ಲಿ ಅವರ ವಿರುದ್ಧ ಏಳು ಆರೋಪಗಳನ್ನು ನಿಗದಿಪಡಿಸಲಾಗಿದೆ. ತಾವು ಅಮಾಯಕ ಎಂದಿರುವ ಟ್ರಂಪ್, ಜೋ ಬೈಡನ್ ಆಡಳಿತವು ಸುಳ್ಳು ದೂಷಣೆಗಳನ್ನು ಹೊರಿಸಿದೆ ಎಂದು ಕಿಡಿಕಾರಿದ್ದಾರೆ.

Donald Trump

ಹೈಲೈಟ್ಸ್‌:

  • ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಏಳು ದೋಷಾರೋಪಗಳು ನಿಗದಿ
  • ಅಧಿಕಾರದಿಂದ ನಿರ್ಗಮಿಸುವಾಗ ಸೂಕ್ಷ್ಮ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದ ಟ್ರಂಪ್
  • ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿ ಎರಡು ದೋಷಾರೋಪಗಳಿಗೆ ಗುರಿಯಾದ ಮಾಜಿ ಅಧ್ಯಕ್ಷ

ವಾಷಿಂಗ್ಟನ್: ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಹಳ ಸೂಕ್ಷ್ಮವಾದ ದಾಖಲೆಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ. ಅಮೆರಿಕದ ಇತಿಹಾಸದಲ್ಲಿ ಹೀಗೆ ದೋಷಾರೋಪಣೆಗೆ ಗುರಿಯಾದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಇದರಿಂದ ಅಮೆರಿಕ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಶ್ವೇತಭವನದಿಂದ ನಿರ್ಗಮಿಸಿದ ನಂತರ ತಮ್ಮ ಫ್ಲೋರಿಡಾ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಟ್ರಂಪ್, ಸರ್ಕಾರದ ಕೆಲವು ರಹಸ್ಯ ಹಾಗೂ ಸೂಕ್ಷ್ಮ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು ಹಾಗೂ ಸರ್ಕಾರದ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರು ಎಂಬ ಆರೋಪದಲ್ಲಿ ಫೆಡರಲ್ ಗ್ರ್ಯಾಂಡ್ ನ್ಯಾಯಾಧೀಶರು ಅವರ ವಿರುದ್ಧ ದೋಷಾರೋಪಣೆ ನಿಗದಿಪಡಿಸಿದ್ದಾರೆ.

ರಹಸ್ಯ ಹಾಗೂ ಸೂಕ್ಷ್ಮ ಕಡತಗಳನ್ನು ಅನಧಿಕೃತವಾಗಿ ತಮ್ಮ ಬಳಿ ಇರಿಸಿಕೊಂಡಿದ್ದು, ಸುಳ್ಳು ಹೇಳಿಕೆ ನೀಡಿದ್ದು ಮತ್ತು ಅಡಚಣೆಯ ಸಂಚು ಸೇರಿದಂತೆ ಹಲವು ಪ್ರಕರಣಗಳನ್ನು 76 ವರ್ಷದ ಟ್ರಂಪ್ ವಿರುದ್ಧ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

ಇದು ಟ್ರಂಪ್ ವಿರುದ್ಧದ ಎರಡನೇ ದೋಷಾರೋಪಣೆಯಾಗಿದ್ದರೆ, ಮೊದಲ ಫೆಡರಲ್ ದೋಷಾರೋಪವಾಗಿದೆ. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಟ್ರಂಪ್ ಹವಣಿಸುತ್ತಿದ್ದಾರೆ. ಆದರೆ ಅಮೆರಿಕ ನ್ಯಾಯಾಂಗ ಇಲಾಖೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವು ಟ್ರಂಪ್ ಅವರಿಗೆ ಮತ್ತೊಂದು ಹಿನ್ನಡೆ ಉಂಟುಮಾಡಿದೆ.

ಅಮೆರಿಕದ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪದಲ್ಲಿ ದೋಷಾರೋಪಕ್ಕೆ ಗುರಿಯಾದ ಮೊದಲಿಗರಾಗಿರುವ ಟ್ರಂಪ್ ವಿರುದ್ಧದ ಎರಡನೇ ಪ್ರಕರಣ ಇದಾಗಿದೆ. ಟ್ರಂಪ್ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಒಂದು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, ಮಾರ್ಚ್‌ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಿಯಾಮಿಯಲ್ಲಿನ ನ್ಯಾಯಾಲಯದಲ್ಲಿ ಮಂಗಳವಾರ ಹಾಜರಾಗುವಂತೆ ಟ್ರಂಪ್ ಅವರಿಗೆ ಸಮನ್ಸ್ ನೀಡಿದ್ದು, ಅವರ ಕಾನೂನು ತಂಡವು ಏಳು ಆರೋಪಗಳನ್ನು ಎದುರಿಸಲಿದೆ.

ನಾನು ಅಮಾಯಕ ಎಂದ ಟ್ರಂಪ್

ಮಿಯಾಮಿಯಲ್ಲಿನ ಫೆಡರಲ್ ಕೋರ್ಟ್ ಹೌಸ್‌ಗೆ ಹಾಜರಾಗುವಂತೆ ತಮಗೆ ಸಮನ್ಸ್ ನೀಡಲಾಗಿದೆ ಎಂದು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿರುವ ಟ್ರಂಪ್, “ನಾನೊಬ್ಬ ಅಮಾಯಕ ವ್ಯಕ್ತಿ” ಎಂದು ಹೇಳಿಕೊಂಡಿದ್ದಾರೆ.

“ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರಿಗೆ ಇಂತಹ ಸನ್ನಿವೇಶ ಎದುರಾಗುವುದು ಸಾಧ್ಯ ಎಂದು ನಾನು ಊಹಿಸಿಯೂ ಇರಲಿಲ್ಲ. ಅಮೆರಿಕದ ಇತಿಹಾಸದಲ್ಲಿ ಇದು ಖಂಡಿತಾ ಕರಾಳ ದಿನ. ನಮ್ಮದು ಗಂಭೀರ ಹಾಗೂ ಗಣನೀಯ ಕುಸಿತವಾಗುತ್ತಿರುವ ದೇಶವಾಗಿದೆ. ಆದರೆ ನಾವೆಲ್ಲರೂ ಜತೆಗೂಡಿ ಅಮೆರಿಕವನ್ನು ಮತ್ತೊಮ್ಮೆ ಮಹಾನ್ ದೇಶವಾಗಿಸುತ್ತೇವೆ” ಎಂದು ಹೇಳಿದ್ದಾರೆ.

ಟ್ರಂಪ್ ವಿರುದ್ಧದ ಆರೋಪಗಳು

ಟ್ರಂಪ್ ವಿರುದ್ಧ ಏಳು ಫೆಡರಲ್ ಆರೋಪಗಳನ್ನು ಹೊರಿಸಲಾಗಿದೆ. ಎನ್‌ಡಿಐ (ಬೇಹುಗಾರಿಕೆ ಕಾಯ್ದೆ) ಕಡತಗಳನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿರುವುದು, ನ್ಯಾಯದಾನಕ್ಕೆ ಅಡ್ಡಿಪಡಿಸುವ ಸಂಚು, ದಾಖಲೆ ಅಥವಾ ಕಡತವನ್ನು ತಡೆಹಿಡಿದಿರುವುದು, ದಾಖಲೆ ಅಥವಾ ಪ್ರಮಾಣಪತ್ರವನ್ನು ಅಕ್ರಮವಾಗಿ ಬಚ್ಚಿಡುವುದು, ಫೆಡರಲ್ ತನಿಖೆಯಲ್ಲಿನ ದಾಖಲೆಯನ್ನು ಅಡಗಿಸಿಡುವುದು, ಸುಳ್ಳು ಹೇಳಿಕೆಗಳು ಮತ್ತು ಪ್ರತಿನಿಧಿತ್ವ, ರಹಸ್ಯವಾಗಿಡುವ ಯೋಜನೆ ಈ ಆರೋಪಗಳಾಗಿವೆ.

Leave a Reply

Your email address will not be published. Required fields are marked *