ಚೀನಾ : ತಂತ್ರಜ್ಞಾನದಲ್ಲಿ ಅಮೆರಿಕ ಹೊಸ ಹೆಜ್ಜೆ ಹಾಕಿದಾಗೆಲ್ಲಾ ಚೀನಾ ಕೂಡ ತಾನೇನು ಸುಮ್ಮನ್ನಿಲ್ಲ ಎಂದು ಸರಿಸಮಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದೆ. ಕೆಲವೊಮ್ಮೆ ಅಮೆರಿಕವನ್ನೇ ಹಿಂದಿಕ್ಕುವುದುಂಟು. ನಿನ್ನೆಯಿಂದ ಚೀನಾದ ಡೀಪ್ಸೀಕ್ (DeepSeek AI) ಎನ್ನುವ ಹೊಸ ಎಐ ಮಾಡಲ್ ಸದ್ದು ಮಾಡುತ್ತಿದೆ.
ಅಮೆರಿಕದಂಥ ಅಮೆರಿಕ ದೇಶದ ಎಐ ಟೆಕ್ಕಿ ಉದ್ಯಮಿಗಳು ಆವಾಕ್ಕಾಗಿ ನೋಡುತ್ತಿದ್ದಾರೆ. ಓಪನ್ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಯ ವೇಗಕ್ಕೆ ಸಜ್ಜಾಗಬೇಕಾಗಿದೆ. ಪ್ರಬಲ ಎಐ ಮಾಡಲ್ ಸೃಷ್ಟಿಸುವುದು ಹೇಗೆಂದು ಸೋಜಿಗಪಡುತ್ತಿದ್ದ ಭಾರತದಂತಹ ದೇಶಗಳಿಗೆ ಡೀಪ್ಸೀಪ್ ಹೊಸ ಭರವಸೆ ಕೊಟ್ಟಿದೆ.
ಡೀಪ್ಸೀಕ್ ಎನ್ನುವುದು ಚ್ಯಾಟ್ಜಿಪಿಟಿ ರೀತಿಯ ಒಂದು ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಆಗಿದೆ. ಅದು ಹತ್ತರಲ್ಲಿ ಒಂದು ಎಂಬುದು ಹೌದಾದರೂ ಅಮೆರಿಕದ ತಂತ್ರಜ್ಞಾನ ಕಂಪನಿಗಳು ತಲೆಕೆಡಿಸಿಕೊಂಡಿರುವುದು ಮತ್ತೊಂದು ಒಳ ಸಂಗತಿಯಾಗಿದೆ. ಕಡಿಮೆ ಹಣದಲ್ಲಿ ಡೀಪ್ಸೀಕ್ ಸೃಷ್ಟಿಯಾಗಿದೆ. ಒಂದು ಅಥವಾ ಎರಡು ವರ್ಷದ ಹಿಂದಷ್ಟೇ ಆರಂಭವಾದ ಡೀಪ್ಸೀಪ್ ಕಂಪನಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ಎಐ ಮಾಡಲ್ ಸೃಷ್ಟಿಸಿದ್ದು ಸಾಧಾರಣ ಸಂಗತಿಯಲ್ಲ ಎನ್ನಲಾಗಿದೆ.
ಗಮನಾರ್ಹ ಸಂಗತಿ ಎಂದರೆ, ಓಪನ್ಎಐನ ಒ1 ಎನ್ನುವ ಎಲ್ಎಲ್ಎಂ ಪ್ರತೀ ಮಿಲಿಯನ್ ಇನ್ಪುಟ್ ಟೋಕನ್ಗೆ 15 ಡಾಲರ್ ವಿಧಿಸುತ್ತದೆ. ಪ್ರತೀ ಮಿಲಿಯನ್ ಔಟ್ಪುಟ್ ಟೋಕನ್ಗೆ 60 ಮಿಲಿಯನ್ ಡಾಲರ್ ದರ ವಿಧಿಸುತ್ತದೆ. ಆದರೆ, ಡೀಪ್ಸೀಕ್ನ ಆರ್1 ಮಾಡಲ್ ಶೇ. 4ಕ್ಕಿಂತಲೂ ಕಡಿಮೆ ಬೆಲೆಗೆ ಈ ಸರ್ವಿಸ್ ನೀಡುತ್ತದೆ. ಒಂದು ಮಿಲಿಯನ್ ಇನ್ಪುಟ್ ಟೋಕನ್ಗೆ 0.55 ಡಾಲರ್; ಒಂದು ಮಿಲಿಯನ್ ಔಟ್ಪುಟ್ ಟೋಕನ್ಗೆ 2.19 ಡಾಲರ್ ಬೆಲೆ ನಿಗದಿ ಮಾಡಿದೆ.