ಬೆಂಗಳೂರು : ಇಂದು ಶುಭ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಅಪಾರ ಸಂಖ್ಯೆಯಲ್ಲಿ ಬೆಂಗಳೂರು ನಗರದ ಹಲವು ದೇವಸ್ಥಾನಗಳಿಗೆ ಭಕ್ತರು ತೆರಳುತ್ತಿದ್ದಾರೆ.

ಬೆಂಗಳೂರಿನ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನಕ್ಕೆ ನಸುಕಿನ ಜಾವ 3:30 ರಿಂದಲೇ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ದೇವರ ನಾಮಸ್ಮರಣೆ ಮಾಡುತ್ತಾ ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.

ವೈಕುಂಠ ಏಕಾದಶಿ ಹಿನ್ನೆಲೆ ಇಸ್ಕಾನ್‌ ದೇವಸ್ಥಾನದಲ್ಲಿ ನಸುಕಿನ ಜಾವ 3:45ರಿಂದಲೇ ವಿಶೇಷ ಪೂಜೆ, ಅಭಿಷೇಕ, ಲಕ್ಷ್ಮಿ ವೆಂಕಟೇಶ್ವರನಿಗೆ ವಿಶೇಷ ಮಂಗಳರಾತಿ ನೆರವೇರಿಸಲಾಗುತ್ತಿದೆ. ದರ್ಶನಕ್ಕೆ ಬರುವ ಜನರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಪೂಜೆ ಬಳಿಕ ಭಕ್ತಾದಿಗಳಿಗೆ ಲಡ್ಡು, ಪೊಂಗಲ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಶಾಸ್ತ್ರೀಯ ಸಂಗೀತ ಗಾಯಕಿ ವೇದಾ ವಿದ್ಯಾಭೂಷಣ್ ರಿಂದ ಸಂಗೀತ ಸೇವೆ ನೆರವೇರುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ಕಾನ್‌ನ ಸಂಪರ್ಕಾಧಿಕಾರಿ ಚೈತನ್ಯ ದಾಸ್ ಮಾತನಾಡಿದ್ದು, ಬೆಳಗ್ಗೆ 3 ಗಂಟೆಯಿಂದಲೇ ಸುಪ್ರಭಾತ ಸೇವೆ ಆರಂಭಗೊಂಡಿತ್ತು. 3:30ರ ವೇಳೆಗೆ ಮಹಾಭಿಷೇಕ ನೆರವೇರಿಸಲಾಯಿತು. ಮುಂದೆ ಶ್ರೀಕೃಷ್ಣನಿಗೆ ಲಕ್ಷ ಅರ್ಚನೆ ನಡೆಯಲಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. ರಾತ್ರಿ 11 ಗಂಟೆ ವರೆಗೂ ಇಸ್ಕಾನ್‌ ದೇವಸ್ಥಾನದಲ್ಲಿ ಭಕ್ತರಿಗೆ ಮುಕ್ತವಾಗಿ ದರ್ಶನ ಸಿಗಲಿದೆ ಎಂದರು.

ಇಂದು ಒಂದೂವರೆ ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಹಿರಿಯ ನಾಯರಿಕರಿಗೆ ದ್ವಾರದಿಂದ ದೇವಸ್ಥಾನದ ವರೆಗೂ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *