ಉತ್ತರ ಪ್ರದೇಶ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪವಿತ್ರ ವಸಂತ ಪಂಚಮಿ ಹಿನ್ನೆಲೆ ಇಂದು ಕನಿಷ್ಠ 3 ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.
ವಸಂತ ಪಂಚಮಿ ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ 3ನೇ ಅಮೃತ ಸ್ನಾನಕ್ಕೆ ಸಕಲ ಸಿದ್ಧತೆ ನಡೆದಿದ್ದು, ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ, ಹಿನ್ನೆಲೆ ಇಂದು ನಡೆಯುವ ಅಮೃತ ಸ್ನಾನದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಮಹಾಕುಂಭದ ಎಲ್ಲಾ 25 ಸೆಕ್ಟರ್‌ಗಳು ಹಾಗೂ 30 ಪಾಂಟೂನ್ ಸೇತುವೆಗಳು ಮತ್ತು ಪ್ರಮುಖ ಬ್ಯಾರಿಕೇಡ್ ವಲಯಗಳ ಮೇಲ್ವಿಚಾರಣೆ ನಡೆಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಕುಂಭ ಕಮಾಂಡ್ ತಂಡದಿಂದ ಮೇಲ್ವಿಚಾರಣೆ ನಡೆಸಲಾಗಿದೆ. 3,000ಕ್ಕೂ ಅಧಿಕ ಕ್ಯಾಮೆರಾ ಮೂಲಕ ನಿಗಾ ಇರಿಸಲಾಗಿದೆ. ಸ್ನಾನದ ನಂತರ ಘಾಟ್‌ಗಳಲ್ಲಿ ಕಾಲಹರಣ ಮಾಡದಂತೆ, ಊಟೋಪಚಾರ ಮಾಡದಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ. ಸ್ನಾನದ ಬಳಿಕ ಘಾಟ್‌ನಿಂದ ನಿರ್ಗಮಿಸಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಊಟೊಪಚಾರಕ್ಕೆ ತೆರಳುವ ಸಲಹೆ ನೀಡಲಾಗಿದೆ ಎಂದು ತಿಳಿಸಲಾಗಿದೆ.