ಜಯನಗರ ನಿವಾಸಿ ಹಾಗೂ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾದ್ಯಾಪಕ ಹಾಗೂ ಡಾ. ಪಂಚಾಕ್ಷರಿ ಹಿರೇಮಠ (92) ನೆನ್ನೆ ನಿಧನ ಹೊಂದಿದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933ರ ಜ. 6ರಂದು ಜನಿಸಿದ ಪಂಚಾಕ್ಷರಿ ಹಿರೇಮಠ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಪ್ಪಟ ದೇಶಪ್ರೇಮಿ, ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ಬಹುಭಾಷಾ ವಿಶಾರದರು. ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ವಾಗ್ಮಿಯಾಗಿದ್ದರು.

ಹಿರೇಮಠರು 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲುಗು ಹಾಗೂ ಆಂಗ್ಲ ಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ 100ಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಸಾರಸ್ವಲೋಕಕ್ಕೆ ಕೊಡುಗೆ ನೀಡಿದ್ದಾರೆ. ಅವರ ಹಲವಾರು ಕೃತಿಗಳು ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿರುವುದು ವಿಶೇಷವಾಗಿದೆ.

ಸೋವಿಯತ್ ಲ್ಯಾಂಡ್ ನೆಹರೂ ಅವಾರ್ಡ್, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ (ಅನುವಾದ), ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕಮಲಾ ಗೋಯೆಂಕಾ -ಎಂಡೇಷನ್ ಪ್ರಶಸ್ತಿಗಳು ಸಂದಿವೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಕೊಪ್ಪಳ ಜಿಲ್ಲೆ ಬಿಸರಳ್ಳಿ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಬಹುಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಸೇವೆಗೈಯ್ಯುವ ಜೊತೆಗೆ ಸಾಹಿತ್ಯ, ಪ್ರಬಂಧ, ವಿಮರ್ಶೆ, ಅನುವಾದ, ಕಾವ್ಯ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಪಂಚಾಕ್ಷರಿ ಅವರ ಅಗಲಿಕೆಯಿಂದ ನಾಡಿನ ಸಾರಸ್ವತ ಲೋಕ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *