ಬೆಳಗಾವಿ : ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಸಮಾವೇಶ ನಡೆಸುತ್ತಿದೆ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ ಅವರು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಣ ಖರ್ಚು ಮಾಡಿ ಗಾಂಧಿ ಭಾರತ ಸಮಾವೇಶ ಮಾಡುತ್ತಿದ್ದಾರೆ. ಸಮಾವೇಶದ ಬ್ಯಾನರಗಳಲ್ಲಿ ಕಾಂಗ್ರೆಸ್ ಲೀಡರ್, ಮರಿ ಲೀಡರ್, ಯುವ ಲೀಡರ್ ಬ್ಯಾನರ್ ರಾರಾಜಿಸುತ್ತಿವೆ. ಆದರೆ, ಬ್ಯಾನರ್ ಗಳಲ್ಲಿ ಮಹಾತ್ಮಾ ಗಾಂಧಿಜಿ ಪೋಟೋ ದುರ್ಬಿನು ಹಿಡಿದು ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರದ ದುಡ್ಡಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯನ್ನು ಮಾಡುತ್ತಿದ್ದಾರೆ. ಸುರ್ಜೇವಾಲಾ ಹೇಳಿಕೆಯಂತೆ ಸಮಾವೇಶಕ್ಕೂ ಇಡಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಪಕ್ಷದ ಆರೋಪ ಮಾಡುವ ಬದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ದಿನವೂ ಡಿನ್ನರ್ ಪಾರ್ಟಿ, ಲಂಚ್ ಪಾರ್ಟಿಗಳು ನಡೆಯುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಯಾರನ್ನು ಏನು ಮಾಡಬೇಕು ಎನ್ನುವುದು ನಮಗೆ ಬಿಟ್ಟಿದ್ದು. ಯಾರು ಏನು ಮಾತನಾಡುವ ಹಾಗಿಲ್ಲ ಎನ್ನುವ ಮಟ್ಟಿಗೆ ಕಾಂಗ್ರೆಸ್ ಬಂದು ನಿಂತಿದೆ ಎಂದರು.
ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಸಾಮಾಜಿಕ-ಆರ್ಥಿಕ ಸಮೀಕ್ಷೆ’ಯ ನೆಪದಲ್ಲಿ ‘ಅವೈಜ್ಞಾನಿಕ ಜಾತಿ ಗಣತಿ’ ನಡೆಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಬಣ ಬಡಿದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಆದರೆ, ಇದೆಲ್ಲವನ್ನೂ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ ಎಂದರು.