ಬೆಂಗಳೂರು : ಕರ್ನಾಟಕದಲ್ಲಿ ಲಿಂಗಾಯತ ಪರಮೋಚ್ಛ ನಾಯಕ ಅಂತಾನೇ ಬಿಎಸ್ ಯಡಿಯೂರಪ್ಪ ಗುರುತಿಸಿಕೊಂಡಿದ್ದಾರೆ. ಲಿಂಗಾಯತರ ದೊಡ್ಡ ಶಕ್ತಿಯೇ ಬಿಎಸ್ವೈ ಕುಟುಂಬಕ್ಕೆ ಇದೆ. ಆದರೂ ಕೂಡ ರಾಜ್ಯಾಧ್ಯಕ್ಷರ ಬದಲಾವಣೆಗೆ ವಿಜಯೇಂದ್ರ ವಿರುದ್ಧವೇ ಸೆಡ್ಡು ಹೊಡೆದು, ಶಾಸಕ ಯತ್ನಾಳ್ ನಿಂತಿರುವುದಕ್ಕೂ ಕಾರಣ ಇದೆ.
ಕೇವಲ ಅವರ ಪರ ಮಾತ್ರ ಲಿಂಗಾಯತ ನಾಯಕರು ಇಲ್ಲ, ನಮ್ಮ ಜೊತೆಯೂ ಲಿಂಗಾಯತ ನಾಯಕರು ಇದ್ದಾರೆ ಎಂದು ಸಂದೇಶ ರವಾನೆ ಮಾಡುವುದಕ್ಕೆ ಇದೀಗ ಹೊರಟ್ಟಿದ್ದಾರೆ. ಘಟಾನುಘಟಿ ಲಿಂಗಾಯತ ನಾಯಕರ ಸಂಪರ್ಕವನ್ನಿಟ್ಟುಕೊಂಡೇ, ಅಸ್ತ್ರವನ್ನ ಹೂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸ್ಪರ್ಧೆ ಮಾಡಲು ನಮ್ಮ ಬಣವೂ ರೆಡಿ ಇದೆ ಎಂದು ಈ ಹಿಂದೆಯೇ ಯತ್ನಾಳ್ ಸಾರಿ ಸಾರಿ ಹೇಳಿದ್ದರು. ಲಿಂಗಾಯತ ಕೋಟಾ ಅಂತಾ ಬಂದ್ರೆ ಐ ಆ್ಯಮ್ ರೆಡಿ ಅಂತಾನೂ ಮೆಸೇಜ್ ಪಾಸ್ ಮಾಡಿದ್ದರು. ಇದಿಷ್ಟೇ ಅಲ್ಲ, ಇತ್ತೀಚೆಗಷ್ಟೇ ಯತ್ನಾಳ್, ನಾನು ರೇಸ್ನಲ್ಲಿ ಇದ್ದೇ ಇದ್ದೀನಿ, ಸಿಎಂ ಸ್ಥಾನದ ರೇಸ್ನಲ್ಲೂ ಇದ್ದೀನಿ ಅನ್ನೋ ಮೂಲಕ ತಮ್ಮ ವರ್ಚಸ್ಸು ಏನು ಎನ್ನುವ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಮುಖ್ಯವಾದ ಸಭೆಯೊಂದು ನಡೆಯಿತು. ಸಭೆಯಲ್ಲಿ ಪ್ರಮುಖ ವೀರಶೈವ ಲಿಂಗಾಯತ ಮುಖಂಡರು ಭಾಗಿಯಾಗಿದ್ದರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್ ಸೇರಿ ಹಲವು ಪ್ರಮುಖ ಲಿಂಗಾಯತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಇನ್ನು ಭಿನ್ನರ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಸಭೆ ಆರಂಭಕ್ಕೂ ಮುನ್ನವೇ ಎಲ್ಲರಿಗೂ ಧೈರ್ಯ ತುಂಬಿದ ಯತ್ನಾಳ್, ನಾಯಕತ್ವದ ವಿಚಾರವಾಗಿ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ತಿಳಿಸಿ.. ಯಾರಿಗೂ ಅಂಜಬೇಡಿ ಎಂದು ಹೇಳಿದರು.
ಇನ್ನು ಸಭೆಯಲ್ಲಿ ವಿಜಯೇಂದ್ರ ನಡೆಯಿಂದ ಲಿಂಗಾಯತರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಲಿಂಗಾಯತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸಭೆ ಬಳಿಕ ಸಮುದಾಯದ ಬಿಜೆಪಿ ಮುಖಂಡ ಉಮೇಶ್ ಮಹಾಬಲ ಶೆಟ್ಟಿ ಮಾತನಾಡಿ, ಪ್ರತಿಯೊಂದು ಜಿಲ್ಲೆಗಳಿಂದ ಮೂರ್ನಾಲ್ಕು ಜನ ಬಂದಿದ್ದೇವೆ. ಬಿಜೆಪಿ ಮೊದಲಿಂದಲೂ ಕುಟುಂಬ ರಾಜಕಾರಣಕ್ಕೆ ವಿರೋಧಿಸುತ್ತಾ ಬಂದಿದೆ.
ಆದರೆ ಯಡಿಯೂರಪ್ಪ ಅವರ ಮಗನಿಗೆ ಜವಾಬ್ದಾರಿ ಕೊಡೋ ಮೂಲಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು. ನಾವು ತಂಡ ಮಾಡಿಕೊಂಡು ಹೋಗಿ ಹೈಕಮಾಂಡ್ ಮುಂದೆ ನಮ್ಮ ಸಭೆಯ ನಿರ್ಣಯ ತಿಳಿಸುತ್ತೇವೆ ಎಂದರು.