ಬಿಬಿಎಂಪಿ ಚುನಾವಣೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿರುವ ಬಗ್ಗೆ ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸುತ್ತಿವೆ.
ಸಿಎಂ ಸಿದ್ದರಾಮಯ್ಯ
ಬೆಂಗಳೂರು: 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಮುನ್ನವೇ ಬಿಬಿಎಂಪಿ ಚುನಾವಣೆಯನ್ನ(BBMP Elections) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈ ಸಂಬಂಧ ನಿನ್ನೆ(ಜೂ.13) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್(Congress) ಉಸ್ತುವಾರಿ ಸುರ್ಜೇವಾಲಾ (Surjewala) ನೇತೃತ್ವದಲ್ಲಿ ಚುನಾವಣಾ ಪೂರ್ವ ಸಿದ್ದತೆಗಳ ಕುರಿತಾಗಿ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸಹ ಪಾಲ್ಗೊಂಡಿರುವುದಕ್ಕೆ ಬಿಜೆಪಿ(BJP), ಜೆಡಿಎಸ್ ಕೆಂಡಾಮಂಡಲವಾಗಿದೆ. ಆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ‘ಸುರ್ಜೇವಾಲ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ನಿನ್ನೆ ಅಧಿಕೃತವಾಗಿ ಸಭೆ ನಡೆಸಿಲ್ಲ ಎಂದಿದ್ದಾರೆ.
ರಣದೀಪ್ ಸುರ್ಜೇವಾಲ ಶಾಂಗ್ರಿಲಾ ಹೋಟೆಲ್ನಲ್ಲಿ ಇದ್ದರು. ಈ ವೇಳೆ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚಿಸಲು ಶಾಸಕರನ್ನು ಕರೆದಿದ್ದರು. ಇದೇ ಕಾರಣಕ್ಕೆ ಸುರ್ಜೇವಾಲ ಭೇಟಿಯಾಗಲು ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಹೋಗಿದ್ದರು. ಜೊತೆಗೆ ಸಿಟಿರೌಂಡ್ಸ್ ಬಗ್ಗೆ ಡಿಕೆಶಿಯವರನ್ನ ಭೇಟಿಯಾಗಲು ಅಧಿಕಾರಿಗಳು ಬಂದಿದ್ದರು. ಈ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಾದ್ರೆ ಕೊಡಲಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಭೆ ವಿಚಾರವಾಗಿ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಇನ್ನು ಅಧಿಕಾರಿಗಳ ಜತೆ ರಾಜ್ಯ ‘ಕೈ’ ಉಸ್ತುವಾರಿ ಸುರ್ಜೇವಾಲ ಸಭೆ ವಿಚಾರ ‘ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೌದು ‘ಅಧಿಕಾರಿಗಳಿಗೆ ಸುರ್ಜೇವಾಲ ಏನು ಸೂಚನೆ ಕೊಟ್ಟಿದ್ದಾರೆ ಗೊತ್ತಿದೆ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಬದುಕುತ್ತೀರಾ?, ಜನ ಮತ ಹಾಕಿದ್ದು ನಿಮಗೋ, ದಶಪಥ ಕಾಂಗ್ರೆಸ್ ಹೈಕಮಾಂಡ್ಗೋ?. ಎಂತಹ ದುರ್ಗತಿ ಬಂದಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ಹೈಕಮಾಂಡ್ ಹಂಗಿನಾ ಸರ್ಕಾರ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಎಂದ ಕುಮಾರಸ್ವಾಮಿ
ಸಭೆಯಲ್ಲಿದ್ದ ನಿಮ್ಮ ಮಂತ್ರಿಯೇ ಆ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಇವರು, ‘ಕೈ’ ನಾಯಕರಿಗೆ ಡೈರಕ್ಷನ್ ಕೊಟ್ಟು ಲೂಟಿ ಮಾಡಲು ಬಂದಿದ್ದಾರೆ. 2 ರಾಷ್ಟ್ರೀಯ ಪಕ್ಷಗಳು ಇರುವುದೇ ರಾಜ್ಯವನ್ನು ಲೂಟಿ ಹೊಡೆಯೋಕೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ ಮಾಡಿದ ವಿಚಾರವಾಗಿ‘ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು?, ನಾನು ವಿರೋಧ ಪಕ್ಷದವರ ಜತೆ ರಾಜಕೀಯವಾಗಿ ಮಾತನಾಡಲ್ಲ. ಸಂಸದ ಪ್ರತಾಪ್ ಸಿಂಹ ಎಳಸು ಮನುಷ್ಯ, ಆತನಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಮೈಸೂರು-ಬೆಂಗಳೂರು ಹೈವೇ ಮಾಡಿಸಿದ್ದು ನಾನೇ ಅಂತಾರೆ ಎಂದು ಪ್ರತಾಪ್ ಸಿಂಹ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.