ಕಾಂಗ್ರೆಸ್ ಸರ್ಕಾರದ ಮತ್ತೊಂದು ಪ್ರಮುಖ ಗ್ಯಾರಂಟಿಯಾಗಿರುವ ಅನ್ನಭಾಗ್ಯ(10 ಕೆ.ಜಿ ಅಕ್ಕಿ ಉಚಿತ) ಯೋಜನೆ ಸಂಬಂಧಿಸಿದಂತೆ ರಾಜಕೀಯ ಕಿತ್ತಾಟ ಶುರುವಾಗಿದ್ದು, ಇಂದು ಪರಸ್ಪರ ಪ್ರತಿಭಟನೆಗೆ ಮುಂದಾಗಿವೆ.
ಬಿಜೆಪಿ, ಕಾಂಗ್ರೆಸ್
ಬೆಂಗಳೂರು: ಸಿದ್ದರಾಮನವರ(Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಕಕ್ಕೆ(anna bhagya scheme) ಕೇಂದ್ರ ಸರ್ಕಾರ ಅಕ್ಕಿ ನೀಡದೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಇಂದು (ಜೂ.20) ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಮುಂದಾಗಿದೆ. ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರೆಂಟಿ(Congress guarantee)ಗಳ ಪೈಕಿ ಬಿಪಿಎಲ್ ಕುಟುಂಬ(BPL Family)ದ ಪ್ರತಿ ವ್ಯಕ್ತಿಗೂ 10 ಕೆ.ಜಿ. ಅಕ್ಕಿ(Free rice scheme) ಉಚಿತವಾಗಿ ನೀಡುವ ‘ಅನ್ನಭಾಗ್ಯ’ಕ್ಕೆ ಕೇಂದ್ರ ಆಹಾರ ನಿಗಮವು ಮೊದಲು ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ ರಾಜಕೀಯ ಒತ್ತಡದಿಂದಾಗಿ ಬಳಿಕ ಅಕ್ಕಿ ನೀಡುವುದಿಲ್ಲ ಎಂದು ಯೂಟರ್ನ್ ಹೊಡೆದಿದ್ದು ಇದರಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು, ಇದರಲ್ಲಿ ಜನಪ್ರತಿನಿಧಿಗಳು, ಸಾವಿರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಮಟ್ಟದ ಹೋರಾಟದ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ವಹಿಸಲಾಗಿದೆ.
ಕೇಂದ್ರ ಸರ್ಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಕಾಂಗ್ರೆಸ್ ಮುಂದಾಗಿದೆ. ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯ ಷಡ್ಯಂತ್ರವನ್ನು ನಾಡಿನ ಜನತೆಗೆ ತಿಳಿಸುವ ಅಗತ್ಯವಿದೆ. ತೆಲಂಗಾಣ, ಆಂಧ್ರಪ್ರದೇಶಗಳ ಜೊತೆ ಚರ್ಚಿಸಿದರೂ ಅಲ್ಲಿ ಅಗತ್ಯ ದಾಸ್ತಾನಿಲ್ಲ. ಛತ್ತೀಸ್ಗಢವು ಅಕ್ಕಿ ನೀಡಲು ಸಿದ್ಧವಿದ್ದು ಸಾಗಣೆ ವೆಚ್ಚ ಅಧಿಕ ಆಗುವುದರಿಂದ ಆರ್ಥಿಕವಾಗಿ ಹೊರೆಯಾಗುತ್ತದೆ. ಏನೇ ಆದರೂ ಉಚಿತವಾಗಿ ಅಕ್ಕಿ ನೀಡುವುದರಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ರವಾನಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಮೂಲಕ ಮುಂದಿನ ಲೋಕಸಭಾ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರದ ನಡೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಬಿಜೆಪಿಗೆ ಇರಿಸುಮುರಿಸು ಉಂಟುಮಾಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.
ಕಾಂಗ್ರೆಸ್ನ ಲೆಕ್ಕಾಚಾರಗಳು
- . ಕೇಂದ್ರ ಸರ್ಕಾರ ಬಡವರ ವಿರೋಧಿ ಎಂದು ಬಿಂಬಿಸುವುದು
- ಆ ಮೂಲಕ ಬಿಜೆಪಿ ವರ್ಚಸ್ಸು ಕಳೆಗುಂದುವಂತೆ ಮಾಡುವುದು
- ಗ್ಯಾರಂಟಿ ಸ್ಕೀಂ ಮುಂದಿನ ಲೋಕಸಭೆ ಚುನಾವಣೆ ತನಕ ಜೀವಂತ ಇಡುವುದು
- ಗ್ಯಾರಂಟಿ ಸ್ಕೀಂಗೆ ಇರುವ ಅಡ್ಡಿ ಆತಂಕಗಳಿಗೆ ಬಿಜೆಪಿಯೇ ಹೊಣೆಗಾರಿಕೆ ಎಂದು ಬಿಂಬಿಸುವುದು
- ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ಜನರ ಮನಸ್ಸಿಗೆ ನಾಟುವಂತೆ ಪ್ರಯತ್ನಿಸುವುದು
- ಬಡವರ ಅನ್ನದ ವಿಚಾರವನ್ನು ಬಿಜೆಪಿ ರಾಜಕೀಯ ದ್ವೇಷಕ್ಕೆ ಬಳಸುತ್ತಿದೆ ಎಂಬ ಸಂದೇಶ ರವಾನೆ
ಬಿಜೆಪಿಯಿಂದಲೂ ಪ್ರತಿಭಟನೆ
ಇತ್ತ ಜು.1ರಿಂದ ಅಕ್ಕಿ ನೀಡದಿದ್ದರೆ ಜನತೆ ಸುಮ್ಮನಿರುವುದಿಲ್ಲ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ಗ್ಯಾರಂಟಿ ಯೋಜನೆಯಡಿ ಬಡವರಿಗೆ 10 ಕೆ.ಜಿ. ಅಕ್ಕಿ ವಿತರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ಗೆ ಪ್ರತಿಯಾಗಿ ಬಿಜೆಪಿ ಸಹ ಇಂದು(ಮಂಗಳವಾರ) ಪ್ರತಿಭಟನೆಗೆ ಮುಂದಾಗಿದೆ. ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಒಟ್ಟು ಮೂರು ಹಂತದಲ್ಲಿ ಹೋರಾಟ ಹಮ್ಮಿಕೊಂಡಿದೆ. ಈ ಪೈಕಿ ಮೊದಲ ಹಂತವಾಗಿ ಬಿಜೆಪಿ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹತ್ತು ಸಂಘಟನಾತ್ಮಕ ವಿಭಾಗ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.
ಒಟ್ಟಿನಲ್ಲಿ ಒಟ್ಟಿನಲ್ಲಿ ಅಕ್ಕಿ ರಾಜಕೀಯ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.