ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಪುತ್ರ ವ್ಯಾಮೋಹ ಸಾಬೀತಾಗಿದೆ. ನನ್ನನ್ನು ಕೆಣಕಿದ್ದೀರಿ. ಇದರ ಪರಿಣಾಮ ಮುಂದೆ ಕಾದು ನೋಡಿ ಎಂದು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟಿತರಾದ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಬೆನ್ಸನ್ ಟೌನ್ನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಅಧಿಕಾರ ಇಲ್ಲ. ಕಾರ್ಯಕಾರಿ ಸಮಿತಿಯ ೨/೩ನೇ ಸದಸ್ಯರ ಅನುಮತಿ ಪಡೆದು ಮೊದಲು ನನಗೆ ನೊಟೀಸ್ ಕೊಡಬೇಕು. ನಾನು ಚುನಾವಣಾ ಆಯೋಗದಲ್ಲಿ ಜೆಡಿಎಸ್ ವರಿಷ್ಠರ ನಿರ್ಧಾರವನ್ನು ಪ್ರಶ್ನೆ ಮಾಡುತ್ತೇನೆ.
ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನರು ಅಂದುಕೊಂಡಿದ್ದೆ. ನನ್ನ ವಿಧಾನಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಿದ್ದರಾಮಯ್ಯ ಅವರನ್ನು ಬೈಯುತ್ತಿಲ್ಲವೆಂದು ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಬೈಯ್ಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯವಿಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡುತ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ ಎಂದು ಇಬ್ರಾಹಿಂ ತಿಳಿಸಿದರು. ದೇವೇಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವೇ? ನಾನು ಒಬ್ಬ ಹಿರಿಯ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದೀನಿ. ನನ್ನ ಜತೆ ಮಾತನಾಡಬೇಕೆಂದು ಅವರಿಗೆ ಅನಿಸಲಿಲ್ಲವೇ? ಚನ್ನಪಟ್ಟಣದಲ್ಲಿ ನಾನು ಹೋಗದಿದ್ದರೆ ಕುಮಾರಸ್ವಾಮಿ ಗೆಲ್ಲುತ್ತಿರಲಿಲ್ಲ. ನನ್ನ ಹೋರಾಟ ಈಗಾಗಲೇ ಶುರುವಾಗಿದೆ. ಮೊದಲು ಅವರ ನೊಟೀಸ್ ಕೈಗೆ ಬರಲಿ. ನನ್ನನ್ನು ಉಚ್ಛಾಟನೆ ಮಾಡಲು ಆಗಲ್ಲ ಎಂದು ಅವರು ಹೇಳಿದರು.