B Sriramulu On Congress : ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಪರಿಷ್ಕರಣೆ ಮಾಡಿತ್ತು. ಈಗ ಅದನ್ನು ಕಾಂಗ್ರೆಸ್ ಸರ್ಕಾರದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಬಿ ಶ್ರೀರಾಮುಲು ಮೀಸಲಾತಿ ಮುಟ್ಟಿದರೆ ಸಹಿಸಲ್ಲ, ನಮ್ಮ ಪ್ರಾಣ, ಜೀವವನ್ನು ಕೊಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಹೈಲೈಟ್ಸ್:
- ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ ಬಿ ಶ್ರೀರಾಮುಲು
- “ನಮ್ಮ ಪ್ರಾಣ, ಜೀವ ಕೊಡ್ತೀವಿ, ಮೀಸಲಾತಿ ಮುಟ್ಟಿದರೆ ಸಹಿಸಲ್ಲ”
- ಕಾಂಗ್ರೆಸ್ ಶಾಸಕರ ಮನೆಗಳಿಗೆ ನುಗ್ಗುವ ಕೆಲಸ ಆಗುತ್ತದೆ ಎಂದು ವಾರ್ನಿಂಗ್
ಬೆಂಗಳೂರು : ನಮ್ಮ ಜೀವ, ಪ್ರಾಣ ಕೊಡುತ್ತೇವೆ. ಆದರೆ, ಮೀಸಲಾತಿ ಮುಟ್ಟಿದರೆ ಸಹಿಸಲ್ಲ, ಕಾಂಗ್ರೆಸ್ ಶಾಸಕರ ಮನೆಗಳಿಗೆ ನುಗ್ಗುವಂತಹ ಕೆಲಸ ಕೂಡ ಆಗುತ್ತದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಮೀಸಲಾತಿ ಪರಿಷ್ಕರಣೆ ಹಿಂದಕ್ಕೆ ತೆಗೆದುಕೊಳ್ಳುವ ಚರ್ಚೆಯ ಬಗ್ಗೆ ಮಾತನಾಡಿದ ಅವರು, ಮೀಸಲಾತಿ ಮುಟ್ಟಿದರೆ ಜನರು ಮುಂದೆ ಬೀದಿಗಿಳಿಯುತ್ತಾರೆ. ಎಂತಹ ಪರಿಸ್ಥಿತಿಯಾದರೂ ಸರಿ ಜೀವ, ಪ್ರಾಣ ಬೇಕಾದರೆ ಕೊಡುತ್ತೇವೆ. ಆದರೆ ಮೀಸಲಾತಿ ಮುಟ್ಟುವವರನ್ನು, ತೆಗೆಯುವವರನ್ನು ಸಹಿಸಲ್ಲ ಎಂದು ಕಿಡಿಕಾರಿದ್ದಾರೆ.
00:01 / 03:19
Sriramulu: ಜನಾರ್ದನ ರೆಡ್ಡಿಯ ಪ್ರಾಣ ಸ್ನೇಹಿತನಾಗಿ ಅವರಿಗೆ ಒಳ್ಳೇದಾಗಲಿ ಎಂದು ಬಯಸುತ್ತೇನೆ: ಶ್ರೀರಾಮುಲು
ಜಾತಿ ಗಣತಿ ಬಹಳ ಹಳೇದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅದನ್ನು ಸ್ವೀಕರಿಸಲಿಲ್ಲ. ಅವರೇ ಮುಖ್ಯಮಂತ್ರಿ ಆಗಿದ್ದರು. ತಮ್ಮವರನ್ನೇ ಚೇರ್ಮನ್ ಮಾಡಿದ್ದರು ಕೂಡ ಅವರು ಕೊಟ್ಟ ವರದಿಯನ್ನೇ ಸ್ವೀಕಾರ ಮಾಡಲು ಸಿದ್ಧರಿರಲಿಲ್ಲ. ಈಗ ಜಾತಿ ಗಣತಿ ಬಗ್ಗೆ ಮಾತನಾಡಿದರೆ ಎಲ್ಲಿಗೆ ಹೋಗಿ ನಿಲ್ಲುತ್ತದೆ? ಅಧಿಕಾರದಲ್ಲಿ ಇರುವಾಗ ಒಂದು ಮಾತು, ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಗೆ ಇಳಿದು ಜನ ಹಕ್ಕುಗಳನ್ನು ಪಡೆಯುತ್ತಾರೆ!
ಇನ್ನು, ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಮಾತನಾಡಿದ ಬಿ ಶ್ರೀರಾಮುಲು, ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ಗೆ ಕಷ್ಟ ಆಗುತ್ತಿದೆ. ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ. ಉಚಿತ ವಿದ್ಯುತ್ ಸಿಗುತ್ತದೆ ಎಂದು ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ. ವಿದ್ಯುತ್ ದರವನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ. ಇವುಗಳನ್ನೆಲ್ಲಾ ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಎಲ್ಲರಿಗೂ ಉಚಿತವಾಗಿ ಕೊಡ್ತೀನಿ ಎಂದು ಹೇಳಿ ಈಗ ಎಲ್ಲ ಗ್ಯಾರಂಟಿಗಳಿಗೂ ಷರತ್ತುಗಳನ್ನು ಹಾಕಿದ್ದಾರೆ. ಈ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜನ ಸುಮ್ಮನಿರುವುದಿಲ್ಲ. ಜನ ಬೀದಿಗೆ ಇಳಿದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಶಾಸಕರ ಮನೆಗಳಿಗೂ ಜನ ನುಗ್ಗುವ ಕೆಲಸ ಮಾಡುತ್ತಾರೆ. ಆ ಮೂಲಕ ಕಾಂಗ್ರೆಸ್ನವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದರು.