ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: ವಿದ್ಯಾರ್ಥಿ ಸಾವು, ಇನ್ನೊಬ್ಬ ಬಾಲಕನ ಸ್ಥಿತಿ ಗಂಭೀರ
ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಿರ್ಮಾಣ ಹಂತದ ಕಟ್ಟಡ ಕುಸಿದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹುಬ್ಬಳ್ಳಿ: ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಿರೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.
ವಿಶೃತ್ ಬೆಳಗಲಿ (9) ಮೃತ ವಿದ್ಯಾರ್ಥಿಯಾಗಿದ್ದು, ಪ್ರಭು ನಾಗಾವಿ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ವಿಶೃತ್ ನಿರ್ಮಾಣ ಹಂತದ ಕಟ್ಟಡದ ಕೆಳಭಾಗ ಆಟವಾಡುತ್ತಿದ್ದ. ಆಟವಾಡುವ ಸಂದರ್ಭದಲ್ಲಿ ಏಕಾಏಕಿ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ. ಘಟನೆಗೆ ಕಳಪೆ ಕಾಮಗಾರಿ ಕಾರಣ ಎನ್ನಲಾಗುತ್ತಿದೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.