ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿವಿಧೆಡೆ ಪಟಾಕಿ ಅಂಗಡಿ ಮತ್ತು ಗೋಡಾನುಗಳ ಮೇಲೆ ದಾಳಿ ನಡೆಸಿ ಪೊಲೀಸರು 1.41 ಕೋಟಿ ರೂ. ಮೌಲ್ಯದ ಪಟಾಕಿ ವಶಪಡಿಸಿಕೊಂಡಿದ್ದಾರೆ.
ಸಿರುಗುಪ್ಪ, ತೆಕ್ಕಲಕೋಟೆ, ಸಿರಿಗೇರಿಯಲ್ಲಿನ ಪಟಾಕಿ ಅಂಗಡಿ ಮತ್ತು ಗೋಡಾನುಗಳ ಮೇಲೆ ದಾಳಿ ನಡೆಸಲಾಗಿದೆ. ಡಿವೈಎಸ್ಪಿ ಎಸ್.ಟಿ. ಒಡೆಯರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪ್ರೋಬೆಷನರಿ ಡಿವೈಎಸ್ಪಿ ಉಮಾರಾಣಿ ಸಿರುಗುಪ್ಪ ನಗರದ ಹಳೇ ಎಸ್ಬಿಐ ಎದುರುಗಡೆ ಇರುವ ಅಂಗಡಿಯಲ್ಲಿ 2.50 ಲಕ್ಷ ರೂ., ನಗರದ ಎಪಿಎಂಸಿ ಆವರಣದಲ್ಲಿರುವ ಗೋದಾಮಿನಲ್ಲಿ 6 ಲಕ್ಷ ರೂ., ಪ್ಯಾಟೇ ಅಂಜುನೇಯ ಸ್ವಾಮಿ ದೇವಸ್ಥಾನದ ಹತ್ತಿರ 1.45 ಲಕ್ಷ ರೂ., ಬಸ್ ನಿಲ್ದಾಣದ ಹತ್ತಿರ ಪಾರ್ವತಿ ಏಜೆನ್ಸಿ ಗೋದಾಮಿನಲ್ಲಿ 33.61 ಲಕ್ಷ ರೂ. ತೆಕ್ಕಲಕೋಟೆಯ ಡಿ. ಸಣ್ಣ ಶೇಖಣನ ಮಳಿಗೆಯಲ್ಲಿ 1 ಲಕ್ಷ 62 ಸಾವಿರ ರೂ., ಮರೇಗೌಡರ ಮಳಿಗೆಯಲ್ಲಿ 36 ಸಾವಿರ ರೂ. ಸಿರಿಗೇರಿಯ ನಾಗನಾಥ ದೇವಾಲಯದಲ್ಲಿ 9 ಸಾವಿರ ರೂ. ಮೌಲ್ಯದ ಪಟಾಕಿ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಕಾರ ಹಸಿರು ಪಟಾಕಿ ಬಳಸುವಂತೆ ಜನರಿಗೆ ಸಾಕಷ್ಟು ಮಾರ್ಗಸೂಚಿ ಮತ್ತು ಜಾಹೀರಾತು ನೀಡುತ್ತಿದೆ. ಆದರೆ, ವರ್ತಕರು ತಮ್ಮ ಲಾಭದ ಆಸೆಗೆ ಸಿಡಿ ಮದ್ದಿನ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಈ ರೀತಿ ವ್ಯಾಪಾರ ವಹಿವಾಟು ನಡೆಸುವುದು, ಗೋದಾಮುಗಳಲ್ಲಿ ಸಂಗ್ರಹಿಸಿ ಇಡುವುದು ಅಕ್ಷ್ಯಮ್ಯ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ದಾಳಿ ನಡೆಸಲಾಗಿದೆ.