ವರ್ಷದಲ್ಲಿ ಒಂದು ಬಾರಿ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಸ್ಥಾನ ಗರ್ಭಗುಡಿ ಗುರುವಾರ ತೆರೆಯಲಾಗಿದ್ದು, ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.24ರ ಸುಮಾರಿಗೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ.
ಈ ಬಾರಿಯ ಜಾತ್ರಾ ಮಹೋತ್ಸವ ಇಂದು ಆರಂಭಗೊಂಡಿದ್ದು, ನವೆಂಬರ್ 15 ರವರೆಗೆ ನಡೆಯಲಿದೆ. ಗರ್ಭಗುಡಿಯ ಬಾಗಿಲು ತೆರೆದ ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಹದಿನೈದು ದಿನಗಳಲ್ಲಿ ಹದಿಮೂರು ದಿನಗಳು ಮಾತ್ರ ದಿನದ 24 ಗಂಠೆ ಹಾಸನಾಂಬೆ ದರ್ಶನ ಕರುಣಿಸಲಿದ್ದಾಳೆ. ಈ ಬಾರಿ ಜಾತ್ರಾ ಮಹೋತ್ಸವ ವಿಶೇಷತೆಯಿಂದ ಕೂಡಿದ್ದು ಹೆಲಿಟೂರಿಸಂ, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ಚಾಪರ್ನಲ್ಲಿ ಹಾರಾಟ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿವರ್ಷ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜೊತೆಗೆ ಅಧಿದೇವತೆ ಬೇಡಿಕೊಂಡು ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ಅಚಲ ವಿಶ್ವಾಸ ಇರುವುದರಿಂದ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಅನೇಕ ಕಡೆಗಳಿಂದ ಲಕ್ಷಾಂತರ ಭಕ್ತರಿದ್ದಾರೆ.