(ಸಾಂದರ್ಭಿಕ ಚಿತ್ರ)
ಜೈಪುರ: ಎರಡು ಕಾರುಗಳು ರಸ್ತೆಯಿಂದ ಉರುಳಿ ಬಿದ್ದು ಮರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ರಾಜಸ್ಥಾನದ (Rajasthan) ಹನುಮಾನ್ಗಢದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಹರಿಯಾಣದಿಂದ (Haryana) ಗೊಗಮೇಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ತಿರುವಿನಲ್ಲಿ ಕಾರು ನಿಯಂತ್ರಿಸಲು ಸಾಧ್ಯವಾಗದೆ ರಸ್ತೆಯಿಂದ ಉರುಳಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ರಾತ್ರಿಯಾಗಿದ್ದರಿಂದ ಕಾರು ಚಾಲಕರು ತಿರುವು ಇರುವುದನ್ನು ಗಮನಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಅತಿ ವೇಗವಾಗಿ ಬಂದಿದ್ದರಿಂದ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ.
ಭಿರಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.