ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದ ರಾತ್ರೋರಾತ್ರಿ ಬಂಧನಕ್ಕೆ ಒಳಗಾಗಿದ್ದ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಗೆ ಜಾಮೀನು ಲಭಿಸಿದೆ.
ಕೆಲವು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವರ್ತೂರು ಸಂತೋಷ್ ನ್ಯಾಯಾಲಯದ ಪ್ರತಿಗಳನ್ನು ಪರಪ್ಪನ ಅಗ್ರಹಾರಕ್ಕೆ ತಲುಪಿಸಿದರೆ ಸಂಜೆಯೊಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.
ವರ್ತೂರು ಸಂತೋಷ್ ಉಗುರು ಧರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುತ್ತಿದ್ದಂತೆ ದೊಡ್ಡ ವಿವಾದ ಸೃಷ್ಟಿಯಾಗಿದ್ದು, ಸ್ಟಾರ್ ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್ ಸೇರಿದಂತೆ ಹಲವರ ಮೇಲೆ ಗುಮಾನಿ ಉಂಟಾಗಿದ್ದು, ಅವರ ಮನೆಯನ್ನೂ ವನ್ಯಜೀವಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದರು.
ವರ್ತೂರು ಸಂತೋಷ್ ಗೆ 4 ಸಾವಿರ ರೂ. ಭದ್ರತಾ ಠೇವಣಿ ಮತ್ತು ಒಬ್ಬರ ಶ್ಯೂರಿಟಿ ಆಧಾರದ ಮೇಲೆ ಎರಡನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ನಾಗೇಂದ್ರ ಜಾಮೀನು ಮಂಜೂರು ಮಾಡಿದ್ದಾರೆ.