Sourav Ganguly on Rohit Sharma’s Captaincy Skills: ಟೀಮ್ ಇಂಡಿಯಾ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಯೋಜಿತ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲೂ ಫೈನಲ್‌ಗೆ ದಾಪುಗಾಲಿಟ್ಟಿದ್ದ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ, ಟ್ರೋಫಿಗಾಗಿ ನಡೆದ ಕಾದಾಟದಲ್ಲಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲನುಭವಿಸಿತು. ಈ ಬಗ್ಗೆ ಮಾತನಾಡಿರುವ ಬಿಸಿಸಿಐನ ಮಾಜಿ ಬಾಸ್‌ ಸೌರವ್ ಗಂಗೂಲಿ ಕ್ಯಾಪ್ಟನ್‌ ರೋಹಿತ್‌ ಪರ ಬ್ಯಾಟ್‌ ಬೀಸಿದ್ದಾರೆ.

Sourav Ganguly
ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ (ಚಿತ್ರ: ಬಿಸಿಸಿಐ).

ಹೈಲೈಟ್ಸ್‌:

  • ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿದ ಟೀಮ್ ಇಂಡಿಯಾ.
  • ಮಹತ್ವದ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆತೆತ್ತು 209 ರನ್‌ಗಳ ಸೋಲುಂಡ ರೋಹಿತ್‌ ಶರ್ಮಾ ಬಳಗ.
  • ಟೀಮ್ ಇಂಡಿಯಾ ಮುಗ್ಗರಿಸಿದರೂ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅವರ ನಾಯಕತ್ವದ ಸಾಮರ್ಥ್ಯವನ್ನು ಸಮರ್ಥಿಸಿಕೊಂಡ ಸೌರವ್ ಗಂಗೂಲಿ.

ಬೆಂಗಳೂರು: ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಬಳಿಕ ಭಾರತ ತಂಡವನ್ನು ಮುನ್ನಡೆಬಲ್ಲ ಸಮರ್ಥ ವ್ಯಕ್ತಿ ಎಂದರೆ ಅದು ರೋಹಿತ್‌ ಶರ್ಮಾ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಅಂದಹಾಗೆ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ನಡೆದ 2ನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲನುಭವಿಸಿತು. ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ಮತ್ತೊಮ್ಮೆ ವಿಫಲವಾದ ಕಾರಣ ಅಭಿಮಾನಿಗಳಿಂದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಬಗ್ಗೆ ಮಾತನಾಡಿರುವ ದಾದಾ ಖ್ಯಾತಿಯ ಗಂಗೂಲಿ, ಹಿಟ್‌ಮ್ಯಾನ್‌ ಕ್ಯಾಪ್ಟನ್ಸಿಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವಕಪ್‌ ಗೆಲ್ಲುವುದಕ್ಕಿಂತಲೂ ಐಪಿಎಲ್‌ ಗೆಲ್ಲುವುದು ಬಹಳಾ ಕಷ್ಟವಿದೆ ಎಂದಿದ್ದಾರೆ.

ಅಂದಹಾಗೆ ಭಾರತ ತಂಡ ಕಳೆದ 10 ವರ್ಷಗಳಲ್ಲಿ ಐಸಿಸಿ ಆಯೋಜಿತ ಯಾವುದೇ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿಲ್ಲ. ಎಂಎಸ್‌ ಧೋನಿ ಸಾರಥ್ಯದಲ್ಲಿ 2013ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಪ್ರಶಸ್ತಿಗಳ ಬರ ಎದುರಿಸಿದೆ. ಈ ಬಗ್ಗೆ ಮಾತನಾಡಿರುವ ಸೌರವ್‌ ಗಂಗೂಲಿ, ಸದ್ಯದ ಪರಿಸ್ಥಿತಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲು ರೋಹಿತ್‌ ಶರ್ಮಾ ಅವರೇ ಅತ್ಯುತ್ತಮ ನಾಯಕ ಎಂದಿದ್ದಾರೆ. ಅವರಲ್ಲಿ ಐದು ಬಾರಿ ಇಂಡಿಒಯನ್ ಪ್ರೀಮಿಯರ್‌ ಲೀಗ್‌ ಗೆದ್ದ ಅನುಭವಿದೆ. ಅವರೊಬ್ಬ ಯಶಸ್ವಿ ನಾಯಕ ಎಂದು ಗುಣಗಾನ ಮಾಡಿದ್ದಾರೆ.

ಕ್ಯಾಪ್ಟನ್ಸಿಗೆ ರೋಹಿತ್‌ ದಿ ಬೆಸ್ಟ್‌
“ವಿರಾಟ್‌ ಕೊಹ್ಲಿ ಹಠಾತ್‌ ನಾಯಕತ್ವ ಬಿಟ್ಟಾಗ, ಸೂಕ್ತ ನಾಯಕನ ಆಯ್ಕೆ ಮಾಡುವ ಒತ್ತಡ ಸೆಲೆಕ್ಟರ್ಸ್‌ ಮೇಲಿತ್ತು. ಅಂದಹಾಗೆ ನಮಗೆ ರೋಹಿತ್‌ ಶರ್ಮಾ ಅವರಿಗಿಂತಲೂ ಅತ್ಯುತ್ತಮ ನಾಯಕ ಮತ್ತೊಬ್ಬ ಸಿಗಲಾರ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಅವರು 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರ ನಾಯಕತ್ವ ಉತ್ತಮ ದಾಖಲೆಗಳನ್ನು ಹೊಂದಿದೆ. ಭಾರತಕ್ಕೆ ಏಷ್ಯಾ ಕಪ್‌ ಗೆದ್ದುಕೊಟ್ಟಿದ್ದಾರೆ. ಹೀಗಾಗಿ ನಮ್ಮೆದುರು ಇದ್ದ ಅತ್ಯುತ್ತಮ ಆಯ್ಕೆ ಎಂದರೆ ಅದು ರೋಹಿತ್‌ ಶರ್ಮಾ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡ ಸೋತಿದೆ, ಆದರೂ ತಂಡ ಫೈನಲ್‌ ತಲುಪಿರುವುದು ಕೂಡ ದೊಡ್ಡ ಸಾಧನೆ,” ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

“ಎರಡು ವರ್ಷಗಳ ಹಿಂದೆಯೂ ನಾವು ಡಬ್ಲ್ಯುಟಿಸಿ ಫೈನಲ್ ಪಂದ್ಯ ಸೋತಿದ್ದೆವು. ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಕೂಡ ತಲುಪಿದ್ದೆವು. ಹೀಗಾಗಿ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ ಲಭ್ಯವಿದ್ದ ಅತ್ಯುತ್ತಮ ನಾಯಕನನ್ನೇ ಆಯ್ಕೆ ಮಾಡಿದ್ದಾರೆ,” ಎಂದು ಆಜ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ ಸೌರವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2022ರಲ್ಲಿ ಎಲ್ಲಾ ಮಾದರಿಯಲ್ಲಿ ರೋಹಿತ್‌ ಭಾರತ ತಂಡದ ಕ್ಯಾಪ್ಟನ್‌ ಆಗಿ ಆಯ್ಕೆಯಾದ ಸಂದರ್ಭದಲ್ಲಿ ಸೌರವ್ ಬಿಸಿಸಿಐನ ಅಧ್ಯಕ್ಷರಾಗಿದ್ದರು.

ವಿಶ್ವಕಪ್‌ಗಿಂತಲೂ ಐಪಿಎಲ್‌ ಬಹಳಾ ಕಷ್ಟ
ವಿಶ್ವಕಪ್‌ ಟೂರ್ನಿಗಳಲ್ಲಿ ಸೆಮಿಫೈನಲ್‌ ತಲುಪಲು 5-6 ಪಂದ್ಯಗಳನ್ನು ಆಡಿದರೆ ಸಾಕು. ಅದೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು 17 ಪಂದ್ಯಗಳನ್ನು ಆಡುವಂತ್ತಾಗುತ್ತದೆ. ಹೀಗಾಗಿ ಐಪಿಎಲ್‌ ಟ್ರೋಫಿ ಗೆಲ್ಲುವುದು ಬಹಳಾ ಕಷ್ಟವಿದೆ ಎಂದು ಸೌರವ್ ಹೇಳಿದ್ದಾರೆ.

“ನನಗೆ ರೋಹಿತ್‌ ಶರ್ಮಾ ಮೇಲೆ ಸಂಪೂರ್ಣ ಭರವಸೆ ಇದೆ. ಅವರು ಮತ್ತು ಎಂಎಸ್‌ ಧೋನಿ 5 ಬಾರಿ ಐಪಿಎಲ್‌ ಟ್ರೋಫಿಗಳನ್ನು ಗೆದ್ದಿದ್ದಾರೆ. ಐಪಿಎಲ್‌ ಗೆಲ್ಲುವುದು ಸುಲಭವಲ್ಲ. ಏಕೆಂದರೆ ಅದೊಂದು ಅತ್ಯಂತ ಕಠಿಣ ಟೂರ್ನಿ. ವಿಶವಕಪ್‌ಗಿಂತಲೂ ಐಪಿಎಲ್‌ ಗೆಲ್ಲುವುದು ಬಹಳಾ ಕಷ್ಟವಿದೆ. ವಿಶ್ವಕಪ್‌ ಟೂರ್ನಿಗಳಲ್ಲಿ 4-5 ಪಂದ್ಯಗಳ ಬಳಿಕ ಸೆಮಿಫೈನಲ್‌ ತಲುಪಬಹುದು. ಐಪಿಎಲ್‌ನಲ್ಲಿ ಚಾಂಪಿಯನ್ಸ್‌ ಆಗಲು 17 ಪಂದ್ಯಗಳನ್ನು ಆಡಬೇಕಾಗುತ್ತದೆ,” ಎಂದು ದಾದಾ ವಿವರಿಸಿದ್ದಾರೆ.

Leave a Reply

Your email address will not be published. Required fields are marked *