ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ವಿಲನ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಅವರಿಗೆ ವಿಲನ್ ಹೊರತು ಸ್ನೇಹಿತ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಕೊನೆಯ ಹಂತದಲ್ಲಿ ನೀವು ಮುಖ್ಯಮಂತ್ರಿ ಆಗಿದ್ದೀರಿ. ಹೀಗಾಗಿ ಮುಖ್ಯಮಂತ್ರಿಯಾಗಿ ಒಳ್ಳೆಯ ಹೆಸರು ತೆಗೆದುಕೊಳ್ಳಿ. ಸರ್ಕಾರ ಬಗ್ಗೆ ನಾನು ಚರ್ಚೆ ಮಾಡಲ್ಲ. ತಾಜ್ ವೆಸ್ಟೆಂಡ್, ಅಮೆರಿಕಾದಲ್ಲಿ ಕೂತಿದ್ಯಾಕೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಅಮೆರಿಕಾಗೆ ಹೋಗಿದ್ದು, ನಮ್ಮ ಸಮಾಜದ ಕಾಲಭೈರವೇಶ್ವರನ ಶಂಕುಸ್ಥಾಪನೆ ಮಾಡಬೇಕು ಎಂದು ನಮ್ಮ ಸ್ವಾಮೀಜಿಯವರು ಕರೆದಿದ್ದರು. ಹೀಗಾಗಿ ನಾನು ಅಮೆರಿಕಾಗೆ ಹೋಗಿದ್ದೆ. ನಾನು ಅಲ್ಲಿ ಹೋಗಿ ಇನ್ನೂ ಫ್ಲೈಟ್ನಿಂದ ಇಳಿದಿಲ್ಲ. ಅದಾಗಲೇ ಇಲ್ಲಿ ಮೊದಲ ವಿಕೆಟ್ ಪತನವಾಯಿತು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಐಎಂಎ ಪ್ರಕರಣದ ತನಿಖೆ ನಡೆಯುತ್ತಿರುವಾಗ ಯಾವ ಅಧಿಕಾರಿಯನ್ನು ನಿಮ್ಮ ಮನೆಗೆ ಕರಿಸಿದ್ದೀರಿ ಸಿದ್ದರಾಮಯ್ಯನವರೆ? ಅಧಿಕಾರಿಯ ಕರೆಸೋದಕ್ಕೆ ಹೇಳಿದವರು ಯಾರು? ಐಎಂಎ ಪ್ರಕರಣದಲ್ಲಿ ನಿಮ್ಮ ಆತ್ಮೀಯರು ಸಿಲುಕಬಾರದೆಂಬ ಕಾರಣಕ್ಕೆ ನನ್ನ ಸರ್ಕಾರ ಕಿತ್ತಾಕುವ ಪ್ರಯತ್ನ ಮಾಡಿದ್ದೀರ ಎಂದು ಕುಮಾರಸ್ವಾಮಿ ಹೇಳಿದರು.