ಲಂಡನ್: ಹಮಾಸ್ ಭಯೋತ್ಪಾದಕರು ಇಸ್ರೇಲ್ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾರಕವಾಗಿದ್ದಾರೆ. ಹೀಗಾಗಿ ಅವರಿಗೆ ಗಾಜಾ ಅಥವಾ ಪ್ಯಾಲೆಸ್ಟೈನಿಯನ್ ಪ್ರದೇಶದ ಯಾವುದೇ ಭಾಗವನ್ನು ನಿಯಂತ್ರಿಸಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ತಿಳಿಸಿದ್ದಾರೆ.
ಹಮಾಸ್ ಇಸ್ರೇಲ್ ಯುದ್ಧ ಕುರಿತಂತೆ ಮಾತನಾಡಿರುವ ವಿಡಿಯೋಗಳನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಹಮಾಸ್ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್ ಪಡೆಗಳು, ತಮ್ಮ ದೇಶದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುದ್ಧ ನಿಲುಗಡೆ ಜತೆಗೆ ಎರಡು ರಾಷ್ಟ್ರಗಳ ಸಾರ್ವಭೌಮತ್ವಕ್ಕಾಗಿ ವಿಶ್ವಶಕ್ತಿಗಳು ಪ್ರಯತ್ನಿಸಬೇಕು ಎಂದಿದ್ದಾರೆ.
ಗಾಜಾ ಮತ್ತು ಇರಾನ್ನಲ್ಲಿ ಇರುವ ಬ್ರಿಟನ್ ಪ್ರಜೆಗಳ ಬಗ್ಗೆ ತಮಗೆ ಕಾಳಜಿ ಇದೆ. ಯುದ್ಧ ಸಂಕಷ್ಟದಲ್ಲಿ ಅವರಿಗೆ ಯಾವುದೇ ತೊಂದರೆಯಾಗಬಾರದು. ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಒಟ್ಟಾಗಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನಿಯನ್ನರು ತಮ್ಮ ದೇಶದ ಅಸ್ತತ್ವದ ಹಕ್ಕು ಹೊಂದಿದ್ದಾರೆ. ಹಮಾಸ್ ಉಗ್ರರು ಗಾಜಾ ಪಟ್ಟಿಸೇರಿದಂತೆ ಕೆಲ ಪ್ರದೇಶಗಳಲ್ಲಿ ಹಿಡಿತ ಸಾಧಿಸಿದ್ದಾರೆ. ಇದನ್ನು ಹೋಗಲಾಡಿಸಿ, ಇಸ್ರೇಲಿಗರು ಮತ್ತು ಪ್ಯಾಲೆಸ್ಟೈನಿಯನ್ನರಿಗೆ ಪ್ರತ್ಯೇಕ ದೇಶ ರಚನೆಗೆ ಅವಕಾಶ ನೀಡಬೇಕು. ಇದರಿಂದ ಮಾತ್ರ ಈ ಬಿಕ್ಕಟ್ಟು ಬಗೆಹರಿಯಲು ಸಾಧ್ಯ ಎಂದು ರಿಷಿ ಸುನಕ್ ತಿಳಿಸಿದ್ದಾರೆ.