ಕೊರೊನಾ ವೈರಸ್ ಅಬ್ಬರ ಕಡಿಮೆ ಆದರೂ ಅದರ ದುಷ್ಪರಿಣಾಮಗಳು ಕಡಿಮೆ ಆಗಿಲ್ಲ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ಅತೀ ಹೆಚ್ಚು ದೈಹಿಕ ಶ್ರಮ ಬಯಸುವ ಕೆಲಸ ಅಥವಾ ವ್ಯಾಯಾಮ ಮಾಡಬೇಡಿ. ಇದರಿಂದ ಹೃದಯಾಘಾತ ಸಂಭವಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹೇಳಿದ್ದಾರೆ.
ಗುಜರಾತ್ ನಲ್ಲಿ ಇತ್ತೀಚೆಗೆ ಗಾರ್ಬಾ ನೃತ್ಯ ಮಾಡುವಾಗ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅದರಲ್ಲೂ 13 ಮತ್ತು 17 ವಯಸ್ಸಿನವರು ನಿಧನರಾಗಿದ್ದು ಆಘಾತ ನೀಡಿತ್ತು. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೆಚ್ಚು ದೈಹಿಕ ಶ್ರಮ ಮಾಡಿದರೆ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿಸ್ತೃತ ಅಧ್ಯಯನ ವರದಿ ವಿವರ ನೀಡಿದ ಅವರು, ಕೊರೊನಾ ಅಬ್ಬರದ ವೇಳೆ ಗಂಭೀರ ಸ್ವರೂಪದ ಕೋವಿಡ್ಗೆ ತುತ್ತಾದವರು ಕೆಲವು ಸಮಯದವರೆಗೆ ಕಠಿಣ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದೆ. ಹೀಗಾಗಿ ಕಠಿಣ ಕೆಲಸಗಳನ್ನು ತೀವ್ರ ಕೋವಿಡ್ ಬಾಧಿತರು ಒಂದೆರಡು ವರ್ಷಗಳ ಕಾಲ ಮುಂದೂಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ದೇಶಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಚಿಕ್ಕವಯಸ್ಸಿನವರೇ ಹೃದಯಾಘಾತದಿಂದ ಸಾವಿಗೀಡಾಗುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ವ್ಯಾಯಾಮ ಮಾಡುವಾಗ ಮೃತಪಟ್ಟ ಘಟನೆಗಳು ಆಘಾತ ನೀಡಿದ್ದವು.