ನವದೆಹಲಿ : ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ದಲಿತ ಸಮಾವೇಶ ನಡೆಸಲು ದಲಿತ ಸಚಿವರು ಚಿಂತನೆ ನಡೆಸಿದ್ದು, ಇದಕ್ಕೆ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆ ಇದನ್ನು ಶೋಷಿತರ ಸಮಾವೇಶ ಎಂದು ಹೆಸರು ಪರಿಷ್ಕರಿಸಿ ಸಮಾವೇಶ ನಡೆಸಲು ಚಿಂತಿಸಿರುವುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಸುಳಿವು ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಎನ್.ರಾಜಣ್ಣ, ಏಪ್ರಿಲ್ ಅಥವಾ ಮೇನಲ್ಲಿ ಹುಬ್ಬಳಿ, ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಸಮಾವೇಶ ನಡೆಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಜೊತೆಗೆ ಮಾತನಾಡಿದ್ದು, ಅವರ ಜೊತೆಗೆ ಮಾತನಾಡಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಮಾತನಾಡುವ ಪ್ರಮೇಯ ಬರಲ್ಲ ಎಂದರು.
ನಾವು ಒಂದು ಸಮುದಾಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಸರ್ಕಾರ ಇರುವ ಹಿನ್ನೆಲೆ ಆಡಳಿತ ವಿರೋಧಿ ಅಲೆ ಸಹಜವಾಗಿದೆ. ಹೀಗಾಗಿ ಕಾಂಗ್ರೆಸ್ಗೆ ಯಾವ ಸಮಾವೇಶ ಮಾಡಿದರೆ ಶಕ್ತಿ ಬರುತ್ತೆ ಆ ಸಮಾವೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆ. 2028ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ. ನಾವು ಗ್ಯಾರಂಟಿ ನೀಡಿದ್ದೇವೆ, ಅದರ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಪಕ್ಷದ ಆಶಯದಲ್ಲಿ ಸಮಾವೇಶ ಮಾಡಬೇಕು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಅವರೇ ಬಂದು ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಹೇಳಿ, ಸಮಾವೇಶಕ್ಕೆ ಹೈಕಮಾಂಡ್ ಅನುಮತಿ ನೀಡುವ ನಿರೀಕ್ಷೆ ವ್ಯಕ್ತಪಡಿಸಿದರು.