ಕಾರವಾರ : ಹಲವು ತಿಂಗಳ ಹಿಂದೆ ಕುಸಿದು ಬಿದ್ದಿದ್ದ, ಸದ್ಯ ತೆರವುಗೊಳ್ಳುತ್ತಿರುವ ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆಯ ಕಂಬವೊಂದು ಬುಡದಲ್ಲಿ ತುಂಡಾಗಿ ವಾಲಿ ನಿಂತಿದೆ. ಇದರಿಂದ ಭಾರೀ ಅನಾಹುತ ತಪ್ಪಿರುವ ಘಟನೆ ನಡೆದಿದೆ. ನದಿಯಲ್ಲಿ ವಾಲಿ ನಿಂತ ಸೇತುವೆಯ ಅವಶೇಷ ಜನರಲ್ಲಿ ಆತಂಕ ಸೃಷ್ಟಿಸಿದೆ.
ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಶೇ.70 ರಷ್ಟು ಮುಗಿದಿದ್ದು, ತೆರವು ಕಾರ್ಯಾಚರಣೆಯ ನಡುವೆಯೇ ಕಂಬದ ಬುಡ ತುಂಡಾಗಿ, ಅದರ ಮೇಲಿದ್ದ ಸುಮಾರು 40 ಮೀಟರ್ ಉದ್ದದ ಸೇತುವೆ ಭಾಗ ನದಿಗೆ ವಾಲಿ ಬಿದ್ದಿದೆ. ಪಕ್ಕದಲ್ಲೇ ಹೊಸ ಸೇತುವೆ ಇದ್ದು, ಅದಕ್ಕೆ ಹಾನಿ ಆಗಿಲ್ಲ ಎಂದು ವರದಿಯಾಗಿದೆ.
ತೆರವು ಕಾರ್ಯ ನಡೆಸುವ ಭಾಗವಾಗಿ ಎರಡು ಕಂಬಗಳ ನಡುವಿನ ಸೇತುವೆ ಕೊಂಡಿ ಕಡಿತಗೊಳಿಸಲಾಗಿದ್ದು, ಅದರ ಭಾರ ತಾಳಲಾರದೆ ಕಂಬ ತುಂಡಾಗಿರಬಹುದು. ಕಾರ್ಯಾಚರಣೆಗಾಗಲಿ, ಹೊಸ ಸೇತುವೆಗೆ ಆಗಲಿ ಯಾವುದೇ ಅಡ್ಡಿ ಇಲ್ಲ ಎಂದು ಕಾರ್ಯಾಚರಣೆ ನಡೆಸುತ್ತಿರುವ ಐ.ಆರ್.ಬಿ ಕಂಪನಿ ಎಂಜಿನಿಯರ್ ತಿಳಿಸಿದ್ದಾರೆ ಎನ್ನಲಾಗಿದೆ.