ಬೆಂಗಳೂರು : ರಾಜ್ಯ ಹಾಗೂ ಬೇರೆ ರಾಜ್ಯಗಳ ದೇವಾಲಯಕ್ಕೆ ತೆರಳುವವರಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ಇನ್ಮುಂದೆ ದೇಗುಲದ ರೂಮ್‌ಗಳ ಮಾಹಿತಿ ವೈಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಸಾಮಾನ್ಯವಾಗಿ ಹಬ್ಬ, ಹರಿದಿನದಂದು ಬಹುತೇಕ ಜನ ದೇವಾಲಯಗಳಿಗೆ ತೆರಳುತ್ತಾರೆ. ಈ ವೇಳೆ ದೇವಸ್ಥಾನಗಳ ಜೊತೆಗೆ ಅಲ್ಲಿನ ರೂಮ್‌ಗಳು ಕೂಡ ತುಂಬಾ ರಷ್ ಇರುತ್ತವೆ. ಈ ಸಮಯದಲ್ಲಿ ಉಳಿದುಕೊಳ್ಳಲು ಭಕ್ತಾದಿಗಳು ಪರದಾಡುತ್ತಾರೆ. ಜೊತೆಗೆ ದುಪ್ಪಟ್ಟು ಹಣ ಕೊಟ್ಟು ರೂಮ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ನಿಟ್ಟಿನಲ್ಲಿ, ರಾಜ್ಯ ಹಾಗೂ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.

ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ವಿವಿಧ ಕ್ಷೇತ್ರಗಳಿಗೆ ಹಣ ಮಂಜೂರು ಮಾಡಿದ್ದಾರೆ. ಅದರಂತೆ ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಈ ಕೋಶದಂತೆ ವೆಬ್‌ಸೈಟ್‌ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

ಇನ್ನೂ ಕರ್ನಾಟಕ ಟೆಂಪಲ್ಸ್ ಅಕಾಮಡೇಷನ್ ಡಾಟ್ ಕಾಮ್ (https://karnatakatemplesaccommodation.com) ವೆಬ್‌ಸೈಟ್‌ನಲ್ಲಿ ಭಕ್ತಾದಿಗಳು ದೇವಾಲಯದ ರೂಮ್‌ಗಳನ್ನು ಬುಕ್ ಮಾಡಬಹುದಾಗಿದೆ. ಈ ವೆಬ್‌ಸೈಟ್ ಕ್ಲಿಕ್ ಮಾಡಿದರೆ ದೇವಾಲಯದ ರೂಮ್‌ಗಳ ಮಾಹಿತಿ ದೊರೆಯಲಿದೆ. ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ಕೆಲ ದೇವಾಲಯಗಳ ರೂಮ್‌ಗಳ ಮಾಹಿತಿ ಲಭ್ಯವಿದೆ.

ಕೇವಲ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಾದ ತಿರುಪತಿ, ಶ್ರೀಶೈಲ, ಮಂತ್ರಾಲಯ ಸೇರಿದಂತೆ ರಾಜ್ಯದ ಮುಜರಾಯಿ ಛತ್ರಗಳಿರುವ ಕಡೆ ಬುಕ್ ಮಾಡಬಹುದಾಗಿದೆ. ಇದರಿಂದ ದೇವಾಲಯಗಳ ಆದಾಯ ಹೆಚ್ಚಳವಾಗಲಿದೆ. ಒಟ್ಟಿನಲ್ಲಿ ಮುಜರಾಯಿ ಇಲಾಖೆಯ ಈ ವಸತಿ ಕೋಶದಿಂದ ಒಂದೆಡೆ ದೇವಾಲಯಗಳ ಆದಾಯ ಹೆಚ್ಚಳವಾದರೆ, ಮತ್ತೊಂದೆಡೆ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *