ಕನ್ನಡ ಸಿನಿಮಾ ರಂಗದಿಂದ ಹೆಸರು ಮಾಡಿ, ಪರ ಭಾಷೆಗೆ ಜಂಪ್ ಆಗಿರುವ ರಶ್ಮಿಕಾ ಮಂದಣ್ಣ, ಇದೀಗ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ನೆಲದಲ್ಲಿ ಹುಟ್ಟಿ, ಕಾವೇರಿ ನೀರು ಕುಡಿದು, ಕನ್ನಡ ಚಿತ್ರೋದ್ಯಮದಿಂದಲೇ ಅನ್ನ ಕಂಡುಕೊಂಡಿರುವ ಈ ನಟಿ ಮಾತಿನಲ್ಲೇ ಪ್ರಮಾದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರಮೋಷನ್ ವೇಳೆ ತಾವು ಹೈದರಾಬಾದ್ ನವರು ಎಂದು ಹೇಳಿಕೊಂಡಿದ್ದಾರೆ. ನಾನು ಹೈದರಾಬಾದ್ ನವಳು ಅಂತಹೇಳೋಕೆ ಹೆಮ್ಮೆ ಅನಿಸುತ್ತಿದೆ. ನೀವು ಈಗ ನಮ್ಮ ಬಳಗ ಆಗಿದ್ದೀರಿ ಅನ್ನುವ ಮಾತುಗಳನ್ನು ರಶ್ಮಿಕಾ ಆಡಿದ್ದಾರೆ.
ರಶ್ಮಿಕಾ ಮಂದಣ್ಣ ಆಡಿರುವ ಮಾತಿಗೆ ಸಾಕಷ್ಟು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಕನ್ನಡದ ನೆಲದ ಮೇಲೆ ನೀವು ಕಾಲು ಇಡಬೇಡಿ ಅಂತ ಕಟ್ಟುನಿಟ್ಟಾಗಿ ನುಡಿಗಳಲ್ಲೇ ಕಾಮೆಂಟ್ ಹಾಕಿದ್ದಾರೆ. ರಶ್ಮಿಕಾ ಅವರ ಸಿನಿಮಾಗಳನ್ನು ಕನ್ನಡದಲ್ಲಿ ರಿಲೀಸ್ ಮಾಡಲು ಬಿಡಬೇಡಿ ಅನ್ನುವ ಮಾತೂ ಕೇಳಿ ಬಂದಿವೆ.
ರಶ್ಮಿಕಾಗೆ ತೆಲುಗು ಚಿತ್ರೋದ್ಯಮ ಬೆಳೆಸಿರಬಹುದು. ಆದರೆ, ಅವರಿಗೆ ಬುನಾದಿ ಹಾಕಿಕೊಟ್ಟಿದ್ದು, ಕನ್ನಡ ಚಿತ್ರರಂಗ. ಹೊಸ ನಟಿಯಾಗಿದ್ದರೂ, ಪುನೀತ್ ರಾಜ್ ಕುಮಾರ್, ಗಣೇಶ್, ರಕ್ಷಿತಾ ಶೆಟ್ಟಿ ರೀತಿಯ ಸ್ಟಾರ್ ಗಳು ರಶ್ಮಿಕಾಗೆ ಅವಕಾಶ ಕೊಟ್ಟಿದ್ದಾರೆ.