ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ 8 ವಲಯಗಳಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ತೀವ್ರ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ನಗರದಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಪ್ರತಿನಿತ್ಯ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ.

ಪ್ರತಿ ದಿನ ಹಸಿ ಕಸ ಸಂಗ್ರಹಿಸಲು ಆಟೋ ಟಿಪ್ಪರ್ ಗಳು ಮನೆ-ಮನೆ ಭೇಟಿ ನೀಡಿದರೂ ಸಹ ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಜಾಗಗಳಲ್ಲಿ ಕಸ ಬಿಸಾಡುತ್ತಾರೆ. ಈ ಸಂಬಂಧ ಕಸ ಬಿಸಾಡುವ ಸ್ಥಳ (ಬ್ಲಾಕ್ ಸ್ಪಾಟ್ಸ್) ಗಳನ್ನು ನಿರ್ಮೂಲನೆ ಮಾಡುವ ಹಾಗೂ ಕಸ ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳಾದ ಮುಖ್ಯ ಕಾರ್ಯಾಚರಣಾ ಅಧಿಕಾರಿ, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು ಮತ್ತು ಮಾರ್ಷಲ್‌ಗಳು, ಎನ್‌ಜಿಒಗಳು, ಆರ್‌ಡಬ್ಲ್ಯೂಎಗಳು ಮತ್ತು ಸ್ವಯಂಸೇವಕರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನಗರದಾದ್ಯಂತ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಧ್ವನಿವರ್ಧಕದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮನೆ ಬಾಗಿಲಿಗೆ ತ್ಯಾಜ್ಯವನ್ನು ಸಂಗ್ರಹಿಸಲು ಬರುವ ಆಟೋಗಳಿಗೆ ಹಸ್ತಾಂತರಿಸಬೇಕು. ರಸ್ತೆ ಬದಿ ಬಿಸಾಡದಂತೆ ನಾಗರೀಕರಲ್ಲಿ ಅರಿವು ಮೂಡಿಸಲಾಯಿತು.

ತ್ಯಾಜ್ಯ ಹಾಕುವ ಸ್ಥಳಗಳ ಸೌಂದರ್ಯೀಕರಣ : ನಗರದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ತ್ಯಾಜ್ಯ ಹಾಕಿರುವ ಸ್ಥಳಗಳಲ್ಲಿ ಸ್ವಚ್ಛಗೊಳಿಸಿ ಗೋಡೆಗಳಿಗೆ ಬಣ್ಣ ಬಳಿದು ಸೌಂದರ್ಯೀಕರಣಗೊಳಿಸಲಾಗುತ್ತಿದೆ. ಅದರ ಜೊತೆಗೆ ಆ ಸ್ಥಳದಲ್ಲಿ ಮತ್ತೆ ಕಸ ಹಾಕದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಾದ್ಯಂತ ಕಸ ಬಿಸಾಡುವ ಸ್ಥಳಗಳನ್ನು ತೆರವುಗೊಳಿಸಿ, ಬಣ್ಣ ಬಳಿದು ಸೌಂದರ್ಯೀಕರಣ ಗೊಳಿಸಲಾಗುತ್ತಿದೆ‌. ಅಲ್ಲದೆ ಸ್ವಚ್ಛತೆ ಮಾಡಿರುವ ಸ್ಥಳಗಳಲ್ಲಿ ರಂಗೋಲಿಗಳನ್ನು ಬಿಡಿಸುವ ಹಾಗೂ ಸಸಿಗಳನ್ನು ನೆಡುವ ಕೆಲಸ ಮಾಡಲಾಗುತ್ತಿದೆ.

ಮಾರ್ಷಲ್ ಗಳಿಂದ ನಿಗಾ : ಕಸ ಬಿಸಾಡುವ ಸ್ಥಳಗಳಲ್ಲಿ ಮಾರ್ಷಲ್ ಗಳ ತಂಡವು ನಿಗಾ ವಹಿಸಲಿದ್ದು, ತ್ಯಾಜ್ಯ ಬಿಸಾಡುವವರಿಗೆ ದಂಡ ವಿಧಿಸಿ ಮತ್ತೆ ರಸ್ತೆ ಬದಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ನಿತ್ಯ ಮನೆ ಬಳಿ ಬರುವ ಆಟೋ ಟಿಪ್ಪರ್ ಗಳಿಗೆ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡಲು ಅರಿವು ಮೂಡಿಸಲಾಗುತ್ತಿದೆ.

Leave a Reply

Your email address will not be published. Required fields are marked *