ಬೆಂಗಳೂರು : ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಶುರುವಾಗಲಿದ್ದು, 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ. ಮುಂದಿನ ಸಲ ಬಂದಾಗ ನಾನು ಈ ಕಂಪನಿಗೆ ಭೇಟಿ ಕೊಡುತ್ತೇನೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಸೃಷ್ಟಿಯಾಗುವುದೇ ಉತ್ಪಾದನಾ ವಲಯದಿಂದ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫೂಟ್‌ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ ಪುಷ್ಟಿ ನೀಡಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತಕ್ಕೆ ಜನ ಮೆಚ್ಚುಗೆ ದೊಡ್ಡದಾಗಿಯೇ ಸಿಗುತ್ತಿದೆ. ಮೋದಿ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ. ಜನಧನ್, ಉಜ್ವಲಾ, ಜಲಜೀವನ್ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ ಎಂದರು.
ಈ ಬಾರಿಯ ಬಜೆಟ್ನ ಬಹು ಮುಖ್ಯ ಅಂಶ ತೆರಿಗೆ ಸುಧಾರಣೆಯಾಗಿದ್ದು, ಪ್ರಧಾನಿ ಮೋದಿ ಆರ್ಥಿಕ ಚಿಂತನೆಗಳು ಸಾಕಷ್ಟು ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ಆಗುವುದು ದೊಡ್ಡ ಚರ್ಚೆ ಆಗುತ್ತಿತ್ತು. ಈಗ ನಮಗೆ ಉತ್ತಮ 5ಜಿ ನೆಟ್ ವರ್ಕ್ ಇದೆ.
ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ. ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯ ದೇಶ ಭಾರತ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕತೆಯ ಆರೋಗ್ಯ ಚೆನ್ನಾಗಿದೆ. ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.