ಬೆಂಗಳೂರು : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜ್ಯ ಸರ್ಕಾರ ಬೇಕಾದ್ರೆ, ರನ್ಯಾಗೆ ಕ್ಲೀನ್‌ಚಿಟ್ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಅನುಮಾನ ವ್ಯಕ್ತಪಡಿಸಿದರು.

ರನ್ಯಾ ರಾವ್ ಕೇಸ್ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹ ಮಾಫಿಯಾಗಳು ಹೆಚ್ಚಾಗಿ ತಲೆ ಎತ್ತುತ್ತಿವೆ. ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ರನ್ಯಾ ರಾವ್ ಅನೇಕ ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ತಂದೆ IPS ಅಧಿಕಾರಿ ಅಂತ ರನ್ಯಾಗೆ ರಕ್ಷಣೆ ಕೊಡ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದರು.

ಪೊಲೀಸರ ರಕ್ಷಣೆಯಲ್ಲಿ ರನ್ಯಾ ಓಡಾಡಿದ್ದಾಳೆ. ಸರ್ಕಾರಕ್ಕೆ ನಾಚಿಕೆ ಆಗಬೇಕು. 14 ಕೆಜಿ ಚಿನ್ನ ಸಾಗಾಣೆ ಮಾಡ್ತಾರೆ ಅಂದರೆ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿದೆ ಅನ್ನಿಸುತ್ತೆ. ಸಿಐಡಿ ತನಿಖೆ ಯಾಕೆ ವಾಪಸ್ ಪಡೆದ್ರಿ? ಇದು ನಮಗೆ ಅನುಮಾನ ಬರ್ತಿದೆ. ರನ್ಯಾ ರಾವ್ ಉಳಿಸೋಕೆ ಸರ್ಕಾರ ಮುಂದಾಗ್ತಿರುವ ಅನುಮಾನ ಬರ್ತಿದೆ ಎಂದು ತಿಳಿಸಿದರು.

ರನ್ಯಾ ರಾವ್ ಉಳಿಸಲು ಈ ಸರ್ಕಾರದವರು ಬೇಕಾದ್ರೆ ಮುಡಾ ಕೇಸ್‌ನಲ್ಲಿ ಸೈಟ್ ವಾಪಸ್ ಕೊಟ್ಟಂತೆ ಚಿನ್ನವನ್ನ ದುಬೈಗೆ ವಾಪಸ್ ಇಟ್ಟು ಬಾ ಅಂತ ಹೇಳಿದ್ರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರ ಬೇಕಾದ್ರೆ ರನ್ಯಾಗೆ ಕ್ಲೀನ್ ಚಿಟ್ ಕೊಡುತ್ತಾರೆ.

ಸರ್ಕಾರದ ವರ್ತನೆ ನೋಡಿದ್ರೆ ನಮಗೆ ಅನುಮಾನ ಬರುತ್ತದೆ. ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಹೆಸರು ಕೇಳಿ ಬಂದಿದೆ. ಯಾರು ಅ ಸಚಿವರು ಎಂಬುದು ತನಿಖೆ ಆಗಬೇಕು. ಯಾರೇ ಪ್ರಭಾವಿಗಳು ಇದ್ದರೂ ಕ್ರಮ ಆಗಬೇಕು. ಯಾರು ಇದರ ಹಿಂದೆ ಇದ್ದಾರೆ ಬೆಳಕಿಗೆ ಬರಬೇಕು. ಸಿಬಿಐ ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಇವತ್ತು ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು. ಕುಮಾರಸ್ವಾಮಿ ಕೂಡಾ ಸುದ್ದಿಗೋಷ್ಠಿ ಮಾಡಲಿದ್ದಾರೆ. ಇಷ್ಟು ದಿನ ರನ್ಯಾ ಏರ್ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳನ್ನ ಕಣ್ಣು ತಪ್ಪಿಸಿ ಬಂದಿದ್ದಾಳೆ. ಇದೆಲ್ಲವನ್ನೂ ನೋಡಿದರೆ ಪೊಲೀಸರು ಶಾಮೀಲಾಗಿರುವ ಅನುಮಾನ ಇದೆ. ರಾಜ್ಯ ಸರ್ಕಾರದಿಂದ ಈ‌ ತನಿಖೆ ಆಗೊಲ್ಲ. ಸಿಬಿಐ ತನಿಖೆ ಆಗಬೇಕು ಎಂದರು.

Leave a Reply

Your email address will not be published. Required fields are marked *