ಬೆಂಗಳೂರು : “ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರ ಯೋಜನೆ ಅಡಿಯಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. 30 ವರ್ಷಗಳ ಬಾಳಿಕೆ ಬರುವ ಶಾಶ್ವತ ರಸ್ತೆ ನಿರ್ಮಿಸುವ ಈ ಯೋಜನೆಗೆ ₹ 1700 ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಈ ಯೋಜನೆಯಲ್ಲಿ 14 ಪ್ಯಾಕೇಜ್ ಗಳ ಮೂಲಕ ಬೆಂಗಳೂರಿನ 150 ಕಿ.ಮೀ ಉದ್ದದ 97 ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬಿಡಬ್ಲ್ಯೂ ಎಸ್ ಎಸ್ ಬಿ, ಬಿಬಿಎಂಪಿ, ಬಿಡಿಎ, ಬೆಸ್ಕಾಂಗಳ ನಡುವೆ ಸಮನ್ವಯತೆ ಸಾಧಿಸಿ ಶಾಶ್ವತ ರಸ್ತೆ ನಿರ್ಮಿಸಲಾಗುತ್ತಿದೆ. ಕೇಬಲ್, ಪವರ್ ವೈಯರ್ ಗಳಿಗೆ ಅವಕಾಶ ಕಲ್ಪಿಸಿ, ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶ ನೀಡದೆ, ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಈ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ನಮಗೆ ಗುಣಮಟ್ಟದ ಕಾಮಗಾರಿ ಮುಖ್ಯ. ಕಾಮಗಾರಿ ಶೀಘ್ರಗತಿಯಲ್ಲಿ ಸಾಗಬೇಕು ಎಂದು ಇಂದು ಪರಿಶೀಲನೆ ಮಾಡಿದ್ದೇನೆ. ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯ ಎರಡನೇ ಹಂತದಲ್ಲಿ 450 ಕಿ.ಮೀ ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮಾಡಲಾಗುವುದು. ಈ ಎಲ್ಲಾ ಹಂತಗಳ ಕಾಮಗಾರಿ ಮುಕ್ತಾಯವಾದರೆ ಬೆಂಗಳೂರಿನಲ್ಲಿ ಒಟ್ಟಾರೆ 1,700 ಕಿ.ಮೀ ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದರು.

“ರಸ್ತೆ ಗುಣಮಟ್ಟ ಪರೀಕ್ಷೆಗೆ ನಾನು ಇಂದು ಭೇಟಿ ನೀಡಿದ್ದೇನೆ. ಪಾದಚಾರಿ ಮಾರ್ಗಗಳನ್ನು ನೋಡಿದ್ದೇನೆ. ಭಾನುವಾರ ವಾಹನ ದಟ್ಟಣೆ ಕಡಿಮೆ ಇರುವ ಕಾರಣ ಇಂದು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಎಲ್ಲಾ ಭಾಗಗಳಿಗೆ ಭೇಟಿ ನೀಡುತ್ತಿದ್ದೇನೆ” ಎಂದು ತಿಳಿಸಿದರು.

“ಇದರ ಜತೆಗೆ ಬೆಂಗಳೂರಿನಾದ್ಯಂತ ಸಂಪೂರ್ಣವಾಗಿ ಮಳೆನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದೇವೆ. ನಾವು ಒಂದೇ ದಿನದಲ್ಲಿ ಎಲ್ಲಾ ಬದಲಾವಣೆ ಮಾಡುತ್ತೇವೆ ಎಂದು ಹೇಳುವುದಿಲ್ಲ. ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯೋಜನೆ ಮಾಡುತ್ತಿದ್ದೇವೆ” ಎಂದರು.

Leave a Reply

Your email address will not be published. Required fields are marked *