ನವದೆಹಲಿ : ಕರ್ನಾಟಕ ಕಾಂಗ್ರೆಸ್ನಲ್ಲಿ ಕುರ್ಚಿ ಬದಲಾವಣೆ ಫೈಟ್ ಮತ್ತೊಂದು ರೂಪ ಪಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ ಬಳಿಕ ಬಹಿರಂಗವಾಗಿ ಮಾತನಾಡುತ್ತಿದ್ದ ನಾಯಕರು ಮೌನವಾಗಿದ್ದರು. ಇದೀಗ ಹೈಕಮಾಂಡ್ ನಾಯಕರೇ ಅಖಾಡಕ್ಕೆ ಇಳಿದು, ಸಚಿವರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಒಬ್ಬೊಬ್ಬರೇ ಸಚಿವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ರಾಜ್ಯ ವಿಧಾನಮಂಡಲ ಅಧಿವೇಶನದ ಮಧ್ಯೆಯೂ ಸಚಿವರು ದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರನ್ನು ಭೇಟಿಯಾಗಿದ್ದಾರೆ.
ದೆಹಲಿಯಾತ್ರೆ ಮಾಡುತ್ತಿರುವ ಸಚಿವರೆಲ್ಲರೂ ಪ್ರತ್ಯೇಕವಾಗಿಯೇ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಂಗಳವಾರವಷ್ಟೇ ಆರೋಗ್ಯ ಸಚಿವ ದಿನೇಶ್ ಗುಡೂರಾವ್ಗೆ ಬುಲಾವ್ ನೀಡಿದ್ದ ಕೆಸಿ ವೇಣುಗೋಪಾಲ್, ಎಐಸಿಸಿ ಕಚೇರಿಯಲ್ಲಿ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬುಲಾವ್ ನೀಡಿ ಮಾತುಕತೆ ಮಾಡಿದ್ದಾರೆ.
ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್, ಎಂಬಿ ಪಾಟೀಲ್ ಜೊತೆ ಬುಧವಾರ ಕೆಸಿ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಒಂದೆಡೆ ಹೈಕಮಾಂಡ್ ಜತೆ ಸಚಿವರು ಒಬ್ಬೊಬ್ಬರಾಗಿ ಮಾತುಕತೆ ನಡೆಸುತ್ತಿದ್ದರೆ, ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಕೂಗು ಎಬ್ಬಿಸುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿರುವ ನೆಪದಲ್ಲಿ ಶಾಸಕರಿಗೆ, ಪಕ್ಷದ ಪದಾಧಿಕಾರಿಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಇದೂ ಸಹ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ ಚರ್ಚೆಯ ನಡುವೆ ಹೈಕಮಾಂಡ್ ನಾಯಕರು ಸಚಿವರನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿಸುತ್ತಿರುವುದು ಕುತೂಹಲ ಮೂಡಿಸಿದೆ. ಕುರ್ಚಿ ಬದಲಾವಣೆ ಬಗ್ಗೆ ಸಚಿವರ ಅಭಿಪ್ರಾಯ ಸಂಗ್ರಹಕ್ಕೆ ಹೈಕಮಾಂಡ್ ಮುಂದಾಗಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ.